ಬೆಂಗಳೂರು,ಜ.15- ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ(ಮುಡಾ)ದಲ್ಲಿ ಕಾನೂನು ಬಾಹಿರ ನಿವೇಶನ ಪಡೆದ ಪ್ರಕರಣ ಸಂಬಂಧ ಇದೇ 26ರಂದು ಲೋಕಾಯುಕ್ತ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಹೈಕೋರ್ಟ್ ಸೂಚನೆ ನೀಡಿದೆ. ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಮೇಲನವಿ ಅರ್ಜಿ ವಿಚಾರಣೆ ವೇಳೆ ಧಾರವಾಡ ಸಂಚಾರಪೀಠದ ನ್ಯಾಯಮೂರ್ತಿ ನಾಗಪ್ರಸನ್ನ ಅವರನ್ನೊಳಗೊಂಡ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಇದೇ ವೇಳೆ ಈವರೆಗಿನ ತನಿಖಾ ವರದಿಯನ್ನು ನಾಳೆ ಸಲ್ಲಿಸಬೇಕೆಂದು ಲೋಕಾಯುಕ್ತಪರ ವಕೀಲ ವೆಂಕಟೇಶ್ ಅರೆಬಟ್ಟಿ ಅವರಿಗೂ ಸೂಚನೆ ನೀಡಿತು. ಒಂದು ಹಂತದಲ್ಲಿ ವಕೀಲರಿಗೆ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಏಕೆ ಸಲ್ಲಿಸುತ್ತಿಲ್ಲ. ಪದೇ ಪದೇ ಚಏಕೆ ವಿಳಂಬ ಮಾಡುತ್ತಿದ್ದೀರಿ ಎಂದು ಸಿಡಿಮಿಡಿಯಿಂದಲೇ ನ್ಯಾಯಮೂರ್ತಿಗಳು ವಕೀಲರನ್ನು ಪ್ರಶ್ನಿಸಿದರು.
ಜ.25ರ ಬಳಿಕ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಲಿ. 26ರಂದು ಡಿವೈಎಸ್ಪಿಯವರು ಲೋಕಾಯುಕ್ತ ಎಡಿಜಿಪಿಯವರಿಗೆ ಮುಚ್ಚಿದ ಲಕೋಟಿಯಲ್ಲಿ ವರದಿಯನ್ನು ಸಲ್ಲಿಸಬೇಕು. ಅದೇ ದಿನ ನ್ಯಾಯಾಲಯಕ್ಕೂ ಸಲ್ಲಿಸಬೇಕೆಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ತಾಕೀತು ಮಾಡಿದ್ದಾರೆ.
27ರಂದು ಲೋಕಾಯುಕ್ತ ತನಿಖಾಧಿಕಾರಿಗಳು ಸಲ್ಲಿಸುವ ತನಿಖಾ ವರದಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಿರ್ಣಾಯಕವಾಗಲಿದೆ. ಇದೇ ವೇಳೆ ಮುಂದಿನ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಜ.27ಕ್ಕೆ ಮುಂದೂಡಿತು. ಇದಕ್ಕೂ ಮುನ್ನ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನಾಗಪ್ರಸನ್ನ ಅವರ ಪೀಠವು ವಾದ-ಪ್ರತಿವಾದ ನಡೆಯುವ ವೇಳೆ ಪ್ರಕರಣವನ್ನು ಸಿಬಿಐಗೆ ಕೊಡಬೇಕೇ ಬೇಡವೇ ಎಂಬುದರ ಬಗ್ಗೆಯಷ್ಟೇ ಸೀಮಿತಗೊಳಿಸಿ ಎರಡೂ ಕಡೆಯ ವಕೀಲರಿಗ ಸೂಚನೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಾಲ್, ಅಭಿಷೇಕ್ ಮನುಸಿಂಗ್ವಿ, ಪ್ರೊ.ರವಿವರ್ಮಕುಮಾರ್, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಭೂ ಮಾಲೀಕ ದೇವರಾಜ್ ಪರ ದುಶ್ಯಂತ್ ದವೆ ಹಾಗೂ ಅರ್ಜಿದಾರ ಸ್ನೇಹಮಯಿ ಕೃಷ್ಣ ಪರವಾಗಿ ಮಣೀಂದರ್ ಸಿಂಗ್ ವಾದ ಮಂಡಿಸಿದರು.
ಅರ್ಜಿದಾರ ಸ್ನೇಹಮಯಿ ಕೃಷ್ಣ ಪರ ವಾದ ಮಂಡಿಸಿದ ವಕೀಲ ಮಣೀಂದರ್ ಸಿಂಗ್ ಅವರು, ತನಿಖೆ ನಿಷ್ಪಕ್ಷಪಾತವಾಗಿರಬೇಕು, ಜನರಲ್ಲಿ ವಿಶ್ವಾಸ ಮೂಡಿಸುವಂತಿರಬೇಕು. ರಾಜಕಾರಣಿಗಳು ಭಾಗಿಯಾಗಿರುವಾಗ ನಿಷ್ಪಕ್ಷಪಾತ ತನಿಖೆ ಕಷ್ಟ. ಹೀಗಾಗಿ ಸ್ವತಂತ್ರ ತನಿಖೆ ನಡೆಸುವ ಅಗತ್ಯವಿದೆ. ಮೂವರು ಸದಸ್ಯರ ಕಮಿಟಿ ತನಿಖೆ ಉಸ್ತುವಾರಿ ತೆಗೆದುಕೊಂಡಿದೆ.
ರಾಜ್ಯ ಸರ್ಕಾರದಿಂದ ನೇಮಕವಾದ ಪೊಲೀಸರೇ ಇಲ್ಲಿ ತನಿಖೆ ನಡೆಸುತ್ತಾರೆ. ಲೋಕಾಯುಕ್ತ ಪೊಲೀಸರು ನಿಯೋಜನೆ ಮೇಲೆ ಬಂದಿರುತ್ತಾರೆ. ಹೀಗಾಗಿ, ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. 56 ಕೋಟಿ ರೂ. ಮೊತ್ತದ ಸೈಟ್ಗಳನ್ನು ಅಕ್ರಮವಾಗಿ ಪಡೆದಿದ್ದಾರೆ. ಸಿಎಂ ಪತ್ನಿ ಈಗ 14 ನಿವೇಶನಗಳನ್ನುಮಿಂಚಿನ ವೇಗದಲ್ಲಿ ಹಿಂತಿರುಗಿಸಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸಲು ಮುಂದಾಗಿದೆ. ಅದೇ ದಿನ ಸರ್ಕಾರ ಸೈಟ್ಗಳನ್ನು ಹಿಂಪಡೆಯಲು ಒಪ್ಪಿಗೆ ನೀಡಿದೆ ಎಂದು ವಾದ ಮಂಡಿಸಿದರು.
ಮುಡಾ ವಿರುದ್ಧದ ಆರೋಪಗಳ ತನಿಖೆ ಲೋಕಾಯುಕ್ತರು ನಡೆಸಿದ್ದಾರೆ. ಸ್ವಯಂಪ್ರೇರಿತವಾಗಿ ಲೋಕಾಯುಕ್ತ ಮುಡಾ ಪ್ರಕರಣದ ತನಿಖೆ ನಡೆಸುತ್ತಿದೆ. ಮುಡಾದ ದಾಖಲೆಗಳನ್ನು ಸರ್ಕಾರ ರಚಿಸಿದ ಆಯೋಗ ತೆಗೆದುಕೊಂಡಿದೆ. ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು 145 ಫೈಲ್ ತೆಗೆದುಕೊಂಡಿದ್ದಾರೆ. ಮೈಸೂರಿನ ಲೋಕಾಯುಕ್ತ ಡಿವೈಎಸ್ಪಿಯೇ ಈ ಬಗ್ಗೆ ಪತ್ರ ಬರೆದಿದ್ದಾರೆ. ಐಎಎಸ್ ಅಧಿಕಾರಿ ನೇತೃತ್ವದಲ್ಲಿ ದಾಖಲೆ ವಶಕ್ಕೆ ಪಡೆದಿದ್ದಾರೆ. ನಗರಾಭಿವೃದ್ಧಿ ಸಚಿವರೂ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ತಂಡ ದಾಖಲೆಗಳನ್ನು ಹೊತ್ತೊಯ್ದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, 14 ಸೈಟ್ ಹಂಚಿಕೆಗಳಿಗೂ ಇದಕ್ಕೂ ಸಂಬಂಧವಿದೆಯೇ? ನೀವು ಇದಕ್ಕೆ ತಕರಾರು ಅರ್ಜಿ ಸಲ್ಲಿಸುತ್ತೀರಾ ಎಂದು ಪ್ರಶ್ನೆ ಮಾಡಿದರು. ಕಡತಗಳನ್ನು ಯಾರು ಹೊತ್ತಿಯ್ದಿದ್ದಾರೆ ಎಂಬುದನ್ನು ನಾನು ಸಾಕ್ಷಿ ಸಮೇತ ಸಾಬೀತುಪಡಿಸುತ್ತೇನೆ. ಇದಕ್ಕೆ ನನ್ನ ಬಳಿ ದಾಖಲೆಗಳಿವೆ. ಇದಕ್ಕೆ ನ್ಯಾಯಾಲಯ ಅನುಮತಿ ನೀಡಬೇಕೆಂದು ಮಣೀಂದರ್ ಸಿಂಗ್ ಮನವಿ ಮಾಡಿದರು.
ಈಗಾಗಲೇ ಪ್ರಕರಣ ಸಂಬಂಧ ಇಡಿ ತನಿಖೆ ನಡೆಸಿ ಲೋಕಾಯುಕ್ತಕ್ಕೆ ವರದಿಯನ್ನು ಕೊಟ್ಟಿದೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬದವರು ಕಾನೂನು ಬಾಹಿರವಾಗಿ ನಿವೇಶನಗಳನ್ನು ಪಡೆದಿದ್ದಾರೆ ಎಂಬುದು ಸಾಬೀತಾಗಿದೆ. ಲೋಕಾಯುಕ್ತ ಅಧಿಕಾರಿಗಳು ಸರ್ಕಾರದ ವ್ಯವಸ್ಥೆಯ ಭಾಗವಾಗಿದ್ದಾರೆ. ಅವರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವೇ ಇಲ್ಲ. ಈ ಸರ್ಕಾರ ಆರೋಪಿಗಳನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ. ಇಡಿಯಲ್ಲಿ ಎಲ್ಲವೂ ಬಹಿರಂಗಗೊಂಡಿದೆ. ಮುಕ್ತ ಮತ್ತು ನಿಷ್ಪಕ್ಷಪಾತ ತನಿಖೆಯಾಗಬೇಕಾದರೆ ಸಿಬಿಐನಿಂದ ಮಾತ್ರ ಸಾಧ್ಯ.
ಲೋಕಾಯುಕ್ತ ಅಧಿಕಾರಿಗಳು ಸರ್ಕಾರಕ್ಕೆ ವಿಧೇಯತೆ ತೋರಿಸುವುದರಿಂದ ಪಕ್ಷಪಾತದ ಆರೋಪ ಕೇಳಿಬಂದಿದೆ. ಸಿಬಿಐನಿಂದ ಮಾತ್ರ ನಿಷ್ಪಕ್ಷಪಾತ ತನಿಖೆ ಸಾಧ್ಯ ಎಂದು ಹೇಳಿದರು.
ಆಗ ಸಿಎಂ ಪರ ವಕೀಲ ಪ್ರೊ.ರವಿವರ್ಮಕುಮಾರ್ ಅವರು, ನಮಗೆ ತಕರಾರು ಅರ್ಜಿ ಸಲ್ಲಿಸಲು ಸಮಯ ನೀಡಬೇಕೆಂದು ಮನವಿ ಮಾಡಿಕೊಂಡರು. ಇದಕ್ಕೆ ಅಡ್ವೋಕೇಟ್ ಜನರಲ್ ಶಶಿಕಿರಣ್ ಅವರು ಕೂಡ ದನಿಗೂಡಿಸಿದರು. ಆಗ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಇದನ್ನು ಪುರಸ್ಕರಿಸಿ ಮುಂದಿನ ಅರ್ಜಿ ವಿಚಾರಣೆಯನ್ನು ಜ.27ಕ್ಕೆ ನಿಗದಿಪಡಿಸಿದರು.
ಏನಿದು ಮುಡಾ ಹಗರಣ?:
ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಜಾಗವನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಒಟ್ಟು 1,48,104 ಚದರ ಅಡಿ ಜಾಗ ಇದು.
ಅದರ ಬದಲಿಗೆ ಮುಡಾ 2021ರಲ್ಲಿ ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿ ಜಾಗ ಅಂದರೆ 14 ನಿವೇಶನ ಕೊಟ್ಟಿದ್ದಾರೆ ಇದು ಈಗ ಚರ್ಚೆಗೆ ಕಾರಣವಾಗಿದೆ. ವಿಜಯನಗರ ಬಡಾವಣೆಯಲ್ಲಿ 14 ನಿವೇಶನ ಪತ್ನಿ ಪಾರ್ವತಿ ಅವರಿಗೆ ಮಂಜೂರು ಆಗಲು, ಸಿದ್ದರಾಮಯ್ಯ ಅವರು ಪ್ರಭಾವ ಬೀರಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.