ಬೆಂಗಳೂರು,ಡಿ.5- ಮುಡಾ ಪ್ರಕರಣದಲ್ಲಿ ತಮ ವಿರುದ್ಧದ ತನಿಖೆಯನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಲ್ಲಿಸಲಾಗಿದ್ದ ಮೇಲನವಿ ವಿಚಾರಣೆ ನಡೆಸಿದ ಹೈಕೋರ್ಟ್ನ ದ್ವಿಸದಸ್ಯ ಪೀಠ ಮುಂದಿನ ವಿಚಾರಣೆಯನ್ನು ಜ.25ಕ್ಕೆ ಮುಂದೂಡಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ಕೆ.ವಿ.ಅರವಿಂದ್ ಅವರ ದ್ವಿಸದಸ್ಯ ಪೀಠದಲ್ಲಿ ನಡೆದ ವಿಚಾರಣೆಗೆ ಘಟಾನುಘಟಿ ವಕೀಲರು ಭಾಗವಹಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿದರೆ, ರಾಜ್ಯಸರ್ಕಾರದ ಪರವಾಗಿ ಕಪಿಲ್ ಸಿಬಾಲ್, ಜಮೀನಿನ ಮಾಲೀಕ ದೇವರಾಜ್ ಪರವಾಗಿ ದುಷ್ಯಂತ್ ದವೆ, ದೂರುದಾರರಾದ ಟಿ.ಜೆ.ಅಬ್ರಹಾಂ,
ಸ್ನೇಹಮಯಿ ಕೃಷ್ಣ, ಪ್ರದೀಪ್ ಕುಮಾರ್ ಅವರ ಪರವಾಗಿ ಹಿರಿಯ ವಕೀಲರಾದ ಕೆ.ಜಿ.ರಾಘವನ್, ಮಣಿಧರ್ ಸಿಂಗ್ ವಾದ ಮಂಡಿಸಿದರು.
ಸೆ.24 ರಂದು ಹೈಕೋರ್ಟ್ನ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನೀಡಿರುವ ತೀರ್ಪಿಗೆ ತಡೆಯಾಜ್ಞೆ ನೀಡುವಂತೆ ಹಾಗೂ ಸಿಬಿಐ ತನಿಖೆಗೆ ಸಲ್ಲಿಸಲಾಗಿರುವ ಅರ್ಜಿಯ ಕುರಿತು ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೂ ಯಾವುದೇ ಆದೇಶ ನೀಡದಂತೆ ಸಿದ್ದರಾಮಯ್ಯ ಅವರ ಪರ ಅಭಿಷೇಕ್ ಮನುಸಿಂಘ್ವಿ ಮನವಿ ಮಾಡಿದ್ದರು.
ಕಾವೇರಿದ ವಾದ-ಪ್ರತಿವಾದದ ನಡುವೆಯೂ ಅಲ್ಲಲ್ಲಿ ವಕೀಲರು ಪರಸ್ಪರ ಕಾಲೆಳೆದುಕೊಳ್ಳುತ್ತಾ, ಹಾಸ್ಯಚಟಾಕಿ ಬಳಸುತ್ತಾ ಕಲಾಪವನ್ನು ಸ್ವಾರಸ್ಯಕರವಾಗಿಸಿದರು.
ಆರಂಭದಲ್ಲೇ ದುಷ್ಯಂತ್ ದವೆ ವಾದ ಮಂಡಿಸಿ, ಈ ಪ್ರಕರಣದಲ್ಲಿ ನಾನು ಕಕ್ಷಿದಾರನಾಗಿಲ್ಲ. 20 ವರ್ಷಗಳ ಹಿಂದೆ ಮಾರಾಟ ಮಾಡಿದ್ದ ಜಮೀನಿಗೆ ಈಗ ತೊಂದರೆ ಅನುಭವಿಸಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪು ನೀಡುವಾಗ ತಮ ವಾದವನ್ನೇ ಆಲಿಸಿಲ್ಲ. ಏಕಾಏಕಿ ತನಿಖೆಗೆ ಆದೇಶ ನೀಡಲಾಗಿದೆ ಎಂದು ಆಕ್ಷೇಪಿಸಿದರು.ಭೂಮಿಯ ಡಿನೋಟಿಫಿಕೇಷನ್ ಫಲಾನುಭವಿ ದೇವರಾಜಯ್ಯರೊಬ್ಬರೇ ಅಲ್ಲ. ನೂರಾರು ಪ್ರಕರಣಗಳಲ್ಲಿ ಆರು ಮಂದಿ ಕಾರ್ಯದರ್ಶಿ ಹಂತದ ಅಧಿಕಾರಿಗಳು ಪರಿಶೀಲಿಸಿ ಡಿನೋಟಿಫಿಕೇಟ್ ಮಾಡಿದ್ದಾರೆ. ಏಕಸದಸ್ಯ ಪೀಠದಂತೆ ಪೂರ್ಣ ಸತ್ಯ ಮತ್ತು ಮಾಹಿತಿ ಮಂಡನೆಯಾಗಿಲ್ಲ.
ಆಯ್ದ ವಿಚಾರಗಳು ಮಾತ್ರ ಪ್ರಸ್ತಾಪವಾಗಿ ತೀರ್ಪು ಪ್ರಕಟವಾಗಿದೆ. 1998 ರಲ್ಲಿ ಡಿನೋಟಿಫಿಕೇಷನ್ ಮಾಡಿಸಿ 2004 ರಲ್ಲಿ 5.36 ಲಕ್ಷ ರೂ.ಗಳಿಗೆ ನ್ಯಾಯೋಚಿತವಾಗಿ ಮಾರಿದ್ದೇನೆ. ಖರೀದಿ ಕರಾರು ಕೂಡ ನೊಂದಣಿಯಾಗಿದೆ. ಆಗಿನ ಮೌಲ್ಯ 300 ರೂ. ಇದ್ದರೆ ಈಗ 56 ಕೋಟಿ ರೂ.ಗಳಷ್ಟಾಗಿದೆ. ಏಕಸದಸ್ಯ ಪೀಠದ ತೀರ್ಪಿನಿಂದ ದೇವರಾಜಯ್ಯ ಅವರ ಆಸ್ತಿ ಗಂಭೀರ ಸ್ವರೂಪದ ತೊಂದರೆಗೊಳಗಾಗಿದೆ ಎಂದು ಹೇಳಿದರು.
ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿ, ರಾಜ್ಯಪಾಲರು ಮುಖ್ಯಮಂತ್ರಿ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಲು ಅಧಿಕಾರ ಹೊಂದಿಲ್ಲ. ಸೆಕ್ಷನ್ 17 ಎ ಪ್ರಕಾರ, ನೇಮಕಾತಿ ಪ್ರಾಧಿಕಾರ ತನಿಖೆಗೆ ಅನುಮತಿ ನೀಡಬೇಕು ಎಂದಿದೆ. ಮುಖ್ಯಮಂತ್ರಿಯವರನ್ನು ರಾಜ್ಯಪಾಲರು ನೇಮಿಸುವುದಿಲ್ಲ ಹಾಗೂ ರಾಜ್ಯಪಾಲರು ಸಚಿವ ಸಂಪುಟದ ಸಲಹೆಗಳನ್ನು ಆಧರಿಸಿ ಕರ್ತವ್ಯ ನಿರ್ವಹಣೆ ಮಾಡಬೇಕು. ಕೆಲವು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ನ ತೀರ್ಪಿನನ್ವಯ ವಿನಾಯಿತಿ ಇದೆಯಾದರೂ ಮುಡಾ ಪ್ರಕರಣದಲ್ಲಿ ಆ ರೀತಿಯ ಸಂದರ್ಭಗಳಿಲ್ಲ ಎಂದು ಪ್ರತಿಪಾದಿಸಿದರು.
ರಾಜ್ಯಸರ್ಕಾರದ ಪರವಾಗಿ ವಾದಿಸಿದ ಕಪಿಲ್ ಸಿಬಾಲ್, ಸಾಮಾನ್ಯ ಪ್ರಕರಣಗಳಲ್ಲಿ ವಿಚಾರಣೆ ನಡೆದು ಅನಂತರ ಪೂರ್ವಾನುಮತಿ ಸಲ್ಲಿಸುವ ವಾಡಿಕೆ ಇದೆ. ಈ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಲಾಗಿದೆ. ನರಸಿಂಹರಾವ್ ಪ್ರಕರಣದಲ್ಲಿ ಸಾಂವಿಧಾನಿಕ ಪೀಠ ತೀರ್ಪು ನೀಡಿ ನೇಮಕಾತಿ ಪ್ರಾಧಿಕಾರದವರು ಮಾತ್ರ ವಿಚಾರಣಾ ತನಿಖೆಗೆ ಅನುಮತಿ ನೀಡಬೇಕು ಎಂದು ಹೇಳಿದೆ. ಸಂಸತ್ ಸದಸ್ಯರನ್ನು ವಜಾಗೊಳಿಸಲು ಲೋಕಸಭೆ ಅಧ್ಯಕ್ಷರಿಗೆ ಅಧಿಕಾರವಿದೆ.
ಶಾಸಕರನ್ನು ಅನರ್ಹಗೊಳಿಸಲು ವಿಧಾನಸಭಾಧ್ಯಕ್ಷರಿಗೆ ಅಧಿಕಾರವಿದೆ. ಆದರೆ ಮುಖ್ಯಮಂತ್ರಿಯವರನ್ನು ಯಾರೂ ನೇಮಿಸುವುದಿಲ್ಲ. ಹೀಗಾಗಿ ಇದು ನೇಮಕಾತಿ ಅಧಿಕಾರ ವ್ಯಾಪ್ತಿಗೆ ಸೀಮಿತಗೊಳ್ಳುವುದಿಲ್ಲ ಎಂದು ಸೆಕ್ಷನ್ 17 ಅನ್ನು ಉಲ್ಲೇಖಿಸಿದರು.
ಮುಂದಿನ ವಿಚಾರಣೆಯನ್ನು ಜ.25 ಕ್ಕೆ ಮುಂದೂಡಲಾಗಿದೆ.