ಬೆಂಗಳೂರು, ಜ.23-ಭಾರಿ ಸಂಚಲನ ಸೃಷ್ಟಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಮೇಲಿನ ಮುಡಾ ಹಗರಣ ಕುರಿತಂತೆ ಮೈಸೂರು ಲೋಕಾಯುಕ್ತ ಎಸ್ ಪಿ ನೇತೃತ್ವದ ತನಿಖೆ ಅಂತಿಮ ಹಂತ ತಲುಪಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹೈಕೋರ್ಟ್ ಜ.27ರೊಳಗೆ ತನಿಖಾ ವರದಿಯನ್ನು ನೀಡಬೇಕೆಂದು ಆದೇಶಿಸಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ ಪಿ ಉದೇಶ್ ನೇತೃತ್ವದ ತಂಡ ಈಗಾಗಲೇ ಶೇ.90ರಷ್ಟು ತನಿಖೆಯನ್ನು
ಪೂರ್ಣಗೊಳಿಸಿದ್ದು, ನಾಳೆಯೊಳಗೆ ಸಂಪೂರ್ಣ ವರದಿ ಸಿದ್ಧಗೊಳ್ಳಲಿದೆಯೆಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
50:50 ಅನುಪಾತದ ನಿವೇಶನಗಳ ಹಂಚಿಕೆಯಲ್ಲಿ ಈಗಾಗಲೇ ಹಲವಾರು ದೂರುಗಳು ಬಂದಿದ್ದು, ಅವುಗಳನ್ನು ಕೂಡ ಪರಿಶೀಲಿಸಲಾಗಿದೆ. ಇದರ ನಡುವೆ ಕೆಲವು ಕಡತಗಳು ನಾಪತ್ತೆಯಾಗಿರುವುದು ಮತ್ತು ಇದರಲ್ಲಿ ಕೆಲವು ಹಿರಿಯ ಅಧಿಕಾರಿಗಳು ಭಾಗಿಯಾಗಿರುವುದರ ಬಗ್ಗೆ ಇಡಿ ಈಗಾಗಲೇ ಹೇಳಿರುವುದರಿಂದ ಲೋಕಾಯುಕ್ತ ವರದಿ ಏನಾಗಲಿದೆಯೆಂಬುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ತನಿಖೆ ವೇಳೆಯಲ್ಲಿ ಕೆಲವು ವದಂತಿಗಳು ಹರಡಿದ್ದು, ಇದರ ಬಗ್ಗೆ ಲೋಕಾಯುಕ್ತ ಗಂಭೀರವಾಗಿ ಪರಿಗಣಿಸಿದೆ. ತನಿಖಾ ಸಂದರ್ಭದಲ್ಲಿ ಯಾವುದೇ ರೀತಿಯ ಲೋಪವಾಗಿಲ್ಲ ಮತ್ತು ಇವುಗಳು ನಂಬಲು ಅರ್ಹವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಈಗಾಗಲೇ ಸಿಎಂ ಪತ್ನಿ ಪಡೆದಿದ್ದ ನಿವೇಶನಗಳ ಬಗ್ಗೆ ಒಂದು ಹಂತದಲ್ಲಿ ತನಿಖೆ ನಡೆದಿದ್ದರೆ, ಮುಡಾದ ಸಭೆಯಲ್ಲಿ ನಡೆದ ನಡಾವಳಿಗಳು ಹಾಗೂ ಇತರ ವಿಷಯಗಳ ಬಗ್ಗೆ ಧ್ವನಿ ಸುರುಳಿಯ ಮಾಹಿತಿಗಳು ಸೇರಿದಂತೆ ಹಲವಾರು ಆಯಾಮಗಳಲ್ಲಿ ತನಿಖಾ ವರದಿ ಸಿದ್ಧಪಡಿಸಲಾಗುತ್ತಿದೆ.
ಕೆಲವು ತನಿಖಾ ಸಂಸ್ಥೆಗಳ ಅಭಿಪ್ರಾಯಗಳನ್ನು ಕೂಡ ಪಡೆದಿದ್ದು, ಹಲವಾರು ಕಡತಗಳನ್ನೂ ಕೂಡ ಪರಿಶೀಲಿಸಲಾಗಿದೆ. ಈಗಾಗಲೇ ಅಧಿಕಾರಿಗಳ ವಲಯದಲ್ಲೇ ದೊಡ್ಡ ಪ್ರಮಾಣದ ಪ್ರಮಾದ ಆಗಿರುವ ಬಗ್ಗೆ ಮಾತುಗಳು ಕೇಳಿ ಬಂದಿದ್ದು, ಇದರಿಂದಾಗಿ ಅಂತಿಮವಾಗಿ ಲೋಕಾಯುಕ್ತ ನೀಡುವ ವರದಿ ಮುಂದಿನ ರಾಜಕೀಯ ಬೆಳವಣಿಗೆಗಳನ್ನು ನಿರ್ಧರಿಸಲಿದೆ.
ಈ ನಡುವೆ ತನಿಖಾಧಿಕಾರಿಯಾಗಿರುವ ಮೈಸೂರು ಲೋಕಾಯುಕ್ತ ಎಸ್ಪಿ ಇನ್ನೂ ತಮಗೆ ಯಾವುದೇ ವರದಿಯನ್ನು ಈವರೆಗೆ ನೀಡಿಲ್ಲವೆಂದು ಲೋಕಾಯುಕ್ತ ಎಡಿಜಿಪಿ ಈ ಸಂಜೆಗೆ ತಿಳಿಸಿದ್ದಾರೆ.