ಬೆಂಗಳೂರು,ಅ.30- ಕನ್ನಡಿಗರು, ಕರ್ನಾಟಕದ ವಿರುದ್ಧ ಅವಾಚ್ಯ ನಿಂದನೆ ಮಾಡಿ ವಿಡಿಯೋ ಮಾಡಿದ್ದ ಮಹಾರಾಷ್ಟ್ರ ಮೂಲದ ಇನ್ಸ್ಟ್ರಗ್ರಾಮರ್ ಕೊನೆಗೂ ಕ್ಷಮೆ ಯಾಚಿಸಿದ್ದಾನೆ. ಬೆಂಗಳೂರು ಪೊಲೀಸರು ಮತ್ತು ಮುಂಬೈ ಪೊಲೀಸರ ಎಚ್ಚರಿಕೆ ಬಳಿಕ ಇನ್ಸ್ಟ್ರಗ್ರಾಮರ್ ದೇವ್ ಶರ್ಮಾ ಇದೀಗ ವಿಡಿಯೋ ಮಾಡಿ ಕನ್ನಡಿಗರು ಮತ್ತು ಕರ್ನಾಟಕದ ಕ್ಷಮೆ ಯಾಚಿಸಿದ್ದಾನೆ.
ವಿಡಿಯೋದಲ್ಲಿ ಇಂದು ನನ್ನ ಮನೆಗೆ ಮಹಾರಾಷ್ಟ್ರ ಪೊಲೀಸರು ಬಂದಿದ್ದರು. ನನ್ನ ವಿಡಿಯೋಗಳ ಕುರಿತು ನನಗೆ ಅರಿವು ಮೂಡಿಸಿದ್ದಾರೆ. ನನ್ನ ತಪ್ಪಿನ ಅರಿವಾಗಿದೆ. ಆ ವಿಡಿಯೋಗಳೆಲ್ಲವೂ ನಾನು ಕೋಪದಿಂದ ಮಾಡಿದ್ದು. ಇನ್ನು ಮುಂದೆ ಇಂತಹ ವಿಡಿಯೋಗಳನ್ನು ಮಾಡುವುದಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಮುಂದೆ ಯಾರಿಗೂ ನೋವಾಗದ ರೀತಿಯಲ್ಲಿ ಕ್ರಿಯಾತಕ ವಿಡಿಯೋಗಳನ್ನು ಮಾಡುತ್ತೇನೆ. ದಯವಿಟ್ಟು ಕ್ಷಮಿಸಿ. ನನ್ನ ತಪ್ಪಿನ ಅರಿವು ಮೂಡಿಸಿದ್ದಕ್ಕಾಗಿ ಬೆಂಗಳೂರು ಮತ್ತು ಮುಂಬೈ ಪೊಲೀಸರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾನೆ.
ಇನ್ಸ್ಟ್ರಗ್ರಾಮರ್ ದೇವ್ ಶರ್ಮಾ ತನ್ನ ಖಾತೆಯಲ್ಲಿ ಕನ್ನಡಿಗರು ಮತ್ತು ಕರ್ನಾಟಕದ ಕುರಿತು ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡಿ ವ್ಯಾಪಕ ವಿರೋಧ ಎದುರಿಸುತ್ತಿದ್ದ. ಕನ್ನಡಿಗರು ನೀವೇನಾದರೂ ನನ್ನ ಮುಂದೆ ಬಂದರೆ ನಿಮಗೊಂದು ಗತಿ ಕಾಣಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಈತನ ವಿಡಿಯೋಗಳನ್ನು ಕನ್ನಡಿಗರು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಇದೀಗ ಕನ್ನಡಿಗರ ಕ್ಷಮೆ ಕೇಳಿದ್ದಾನೆ.