ಮುಂಬೈ,ಜು.7- ಮಹರಾಷ್ಟ್ರದ ಥಾಣೆ ಜಿಲ್ಲೆಯ ಕಸಾರಾ ಮತ್ತು ತೀತ್‌ವಾಲಾ ನಿಲ್ದಾಣಗಳ ನಡುವಣ ಸ್ಥಳೀಯ(ಲೋಕಲ್) ರೈಲು ಸಂಚಾರವನ್ನು ಭಾರೀ ಮಳೆಯ ಕಾರಣ ಇಂದು ಬೆಳಗ್ಗೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ ಸುಮಾರು 6.30ರ ವೇಳೆಗೆ ಭಾರೀ ಮಳೆ ಸುರಿದಿದ್ದರಿಂದಾಗಿ ಅಟ್‌ಗಾವ್ ಮತ್ತು ಥನ್ಸಾಟ್ ನಿಲ್ದಾಣಗಳ ನಡುವೆ ಹಳಿಗಳ ಮೇಲೆ ಮಣ್ಣು ಶೇಖರಗೊಂಡಿತು. ಜೊತೆಗೆ ಹಳಿಗಳಿಗೆ ಅಡ್ಡಲಾಗಿ ಮರವೊಂದು ಉರುಳಿಬಿತ್ತು. ಇದರಿಂದ ಭಾರೀ ಜನದಟ್ಟಣೆಯ ಕಲ್ಯಾಣ್-ಕಸಾರಾ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅಡಚಣೆಯಾಯಿತು ಎಂದು ಸೆಂಟ್ರಲ್ ರೈಲ್ವೆ ವಕ್ತಾರರೊಬ್ಬರು ವಿವರಿಸಿದ್ದಾರೆ.
ಉಪನಗರ ರೈಲು ಸೇವೆಗಳು ಮುಂಬೈ ಮಹಾನಗರ ಮತ್ತು ನೆರೆಹೊರೆಯ ಪ್ರದೇಶಗಳಾದ ಥಾಣೆ, ಪಾಲ್ಘರ್ ಮತ್ತು ರಾಯ್‌ಗಢಗಳ ಜೀವನಾಡಿ ಎಂದು ಪರಿಗಣಿತವಾಗಿದೆ. ಕೇಂದ್ರ ರೈಲ್ವೆಯ ಉಪನಗರ ಕಾರ್ಯಜಾಲದಲ್ಲಿ ಪ್ರತಿದಿನ 30 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಾರೆ.