ಮುಂಬೈ, ಏ.19: ಇಬ್ಬರು ಮಕ್ಕಳ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದ ಮಹಿಳಾ ದಂತವೈದ್ಯೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ವಡಾಲಾ ಟ್ರಕ್ ಟರ್ಮಿನಸ್ ಪೊಲೀಸ್ ಠಾಣೆಯ ತಂಡವು ಆರೋಪಿ ರೇಷ್ಮಾ ಸಂತೋಷ್ ಕುಮಾರ್ ಬ್ಯಾನರ್ಜಿಯನ್ನು ಬಂಧಿಸಿದ್ದು, ಕಾರ್ಯಾಚರಣೆಯಲ್ಲಿ ಎರಡು ವರ್ಷದ ಬಾಲಕ ಮತ್ತು ಮೂರು ವರ್ಷದ ಬಾಲಕಿಯನ್ನು ರಕ್ಷಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಗುತ್ತಿಗೆದಾರರೊಬ್ಬರು ಮೇ 2024 ರಲ್ಲಿ ತಮ್ಮ ಅಳಿಯ ಮತ್ತು ಪುಟ್ಟ ಮೊಮ್ಮಗನ ಅಪಹರಣದ ಬಗ್ಗೆ ದೂರು ನೀಡಿದ್ದರು. ದೂರುದಾರರ ಅಳಿಯ ಮಗುವನ್ನು ಆರೋಪಿಗಳಾದ ಅಸ್ಮಾ ಶೇಖ್, ಶರೀಫ್ ಶೇಖ್ ಮತ್ತು ಆಶಾ ಪವಾರ್ ಅವರಿಗೆ 1.6 ಲಕ್ಷ ರೂ.ಗೆ ಮಾರಾಟ ಮಾಡಿರುವ ಬಗ್ಗೆ ತನಿಖೆಯಿಂದ ತಿಳಿದುಬಂದಿತ್ತು.
ನಂತರ ಪೊಲೀಸರು ಮಗುವಿನ ತಂದೆ ಮತ್ತು ಇತರ ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರು ಒಡಿಶಾದ ಭುವನೇಶ್ವರ ರೈಲ್ವೆ ನಿಲ್ದಾಣದಲ್ಲಿ ಮಗುವನ್ನು ಮಹಿಳೆಗೆ ಮಾರಾಟ ಮಾಡಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದರು.
ಈ ವರ್ಷದ ಏಪ್ರಿಲ್ 5 ರಂದು, ಮಹಿಳೆ ಭುವನೇಶ್ವರದ ದಂತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು. ಅಲ್ಲಿಗೆ ತೆರಳಿದ ತಂಡ ಮಕ್ಕಳ ಕಳ್ಳಿ ದಂತವೈದ್ಯೆಯನ್ನು ಬಂಧಿಸಿ ಕರೆ ತಂದಿದೆ.