Wednesday, July 16, 2025
Homeರಾಜ್ಯಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಟ್ಟ ಮಹಾನಗರ ಪಾಲಿಕೆಗಳ ನೌಕರರು

ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಟ್ಟ ಮಹಾನಗರ ಪಾಲಿಕೆಗಳ ನೌಕರರು

Municipal Corporation Employees Call Off Strike Following Government Promise

ಬೆಂಗಳೂರು, ಜು. 16- ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರು ಮಹಾನಗರಪಾಲಿಕೆಗಳ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ನಡೆಸಿದ ಸಂಧಾನ ಸಭೆ ಫಲಪ್ರದವಾಗಿದ್ದು, ಮುಷ್ಕರ ಕೈಬಿಡುವುದಾಗಿ ನೌಕರರು ಪ್ರಕಟಿಸಿದ್ದಾರೆ.

ವಿಕಾಸಸೌಧದಲ್ಲಿ ರಾಜ್ಯದ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಅಮೃತರಾಜ್‌ ಮತ್ತು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ನೇತೃತ್ವದ ಪದಾಧಿಕಾರಿಗಳೊಂದಿಗೆ ಸಚಿವರು ನಡೆಸಿದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಮಹಾನಗರ ಪಾಲಿಕೆಗಳ ಸಾಮಾನ್ಯ ನೇಮಕಾತಿ ನಿಯಮಗಳು 2011 ಕ್ಕೆ ಸಮಗ್ರ ತಿದ್ದುಪಡಿ ಮಾಡುವುದು, ಮಹಾನಗರ ಪಾಲಿಕೆ ನೌಕರರನ್ನು ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ನೌಕರರೆಂದು ಪರಿಗಣಿಸುವುದು, ಸರ್ಕಾರಿ ನೌಕರರ ರೀತಿಯಲ್ಲಿ ಮಹಾನಗರ ಪಾಲಿಕೆಗಳ ಅಧಿಕಾರಿಗಳು ಮತ್ತು ನೌಕರರಿಗೂ ಕೆಜಿಐಡಿ, ಜಿಐಎಸ್‌‍ ಮತ್ತು ಜಿಪಿಎಫ್‌ ಸೌಲಭ್ಯಗಳನ್ನು ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ನೌಕರರ ಸಂಘಗಳು ಸರ್ಕಾರ ಮುಂದಿಟ್ಟಿದ್ದವು.

ಈ ಬಗ್ಗೆ ಸಭೆ ನಡೆಸಿದ ಬಳಿಕ ಸಭೆಯ ಬಗ್ಗೆ ಮಾಹಿತಿ ನೀಡಿದ ಸಚಿವ ಬೈರತಿ ಸುರೇಶ ಅವರು, ಪಾಲಿಕೆ ನೌಕರರಿಗೆ ಸಕಾಲಕ್ಕೆ ವೇತನ ನೀಡುವುದು, ಸಿ ಅಂಡ್‌ ಆರ್‌ ನಿಯಮಗಳಿಗೆ ತಿದ್ದುಪಡಿ ತರುವ ಕುರಿತು ಆರ್ಥಿಕ ಇಲಾಖೆ ಅನುಮೋದನೆ ಪಡೆಯುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಪೌರಾಡಳಿತ ಆಯುಕ್ತರ ಹುದ್ದೆಗಳನ್ನು ಸೃಜಿಸುವಂತೆ ನೌಕರರು ಬೇಡಿಕೆ ಇಟ್ಟಿದ್ದರು. ಆದರೆ, ಕಾನೂನು ಪರಿಮಿತಿಯೊಳಗೆ ವಲಯ ಆಯುಕ್ತರ ಹುದ್ದೆ ಸೃಜಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಆರ್ಥಿಕ ಇಲಾಖೆ ಅಭಿಪ್ರಾಯ ಬಂದ ತಕ್ಷಣ ಕ್ರಮ ವಹಿಸುವುದಾಗಿ ಭರವಸೆ ನೀಡಿರುವುದಾಗಿ ಹೇಳಿದರು.

ಮಂಜೂರಾಗಿರುವ ಪರಿಸರ ಇಂಜಿನಿಯರ್‌ ಗಳ ಹುದ್ದೆಗಳ ಭರ್ತಿಗೆ ಅನುಮೋದನೆ ನೀಡುವಂತೆ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಾಲಿಕೆ ನೌಕರರಿಗೆ ಗುಂಪು ವಿಮೆಸರ್ಕಾರಿ ನೌಕರರ ಮಾದರಿಯಲ್ಲಿ ಪಾಲಿಕೆ ನೌಕರರಿಗೂ ಗುಂಪು ವಿಮೆ ಯೋಜನೆ (ಜಿಐಎಸ್‌‍) ಜಾರಿಗೆ ತರುವ ಬಗ್ಗೆ ಸರ್ಕಾರ ಮುಕ್ತ ಮನಸು ಹೊಂದಿದೆ. ವಿಮಾ ಕಂತಿನ ಮೊತ್ತದಲ್ಲಿ ನೌಕರರು ತಮ್ಮ ಪಾಲಿನ ಮೊತ್ತವನ್ನು ಪಾವತಿಸಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ ಸಚಿವರು, ಈ ಹಿನ್ನೆಲೆಯಲ್ಲಿ ಪಾಲಿಕೆಗಳು ನೌಕರರ ಗುಂಪು ವಿಮೆ ಯೋಜನೆಗೆ ಉಳಿದ ಮೊತ್ತವನ್ನು ಭರಿಸುವುದಾದರೆ ಆಗಬಹುದಾದ ಆರ್ಥಿಕ ಹೊರೆಯನ್ನು ಗಮನಿಸಿ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಉನ್ನತಾಧಿಕಾರಿಗಳಿಗೆ ಆದೇಶ ನೀಡಿದರು.

ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ಪ್ರೋತ್ಸಾಹಪ್ರತಿ ವರ್ಷ ಪಾಲಿಕೆಗಳ ನೌಕರರಿಗೆ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಆರ್ಥಿಕ ಹೊರೆಯಾಗದ ರೀತಿಯಲ್ಲಿ ಪಾಲಿಕೆಗಳಿಂದಲೇ ವೆಚ್ಚ ಭರಿಸಲು ಸೂಚನೆ ನೀಡಲಾಗಿದ್ದು, ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ನೌಕರರ ಇನ್ನಿತರ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸುವ ಭರವಸೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಪಾಲಿಕೆಗಳಿಗೂ ಜ್ಯೋತಿ ಸಂಜೀವಿನಿ ಸರ್ಕಾರಿ ನೌಕರರಿಗೆ ಜಾರಿಗೆ ತಂದಿರುವ ಜ್ಯೋತಿ ಸಂಜೀವಿನಿ ಆರೋಗ್ಯ ವಿಮೆಯನ್ನು ಪಾಲಿಕೆ ನೌಕರರಿಗೂ ವಿಸ್ತರಣೆ ಮಾಡುವ ಬಗ್ಗೆ ಸಹಮತ ವ್ಯಕ್ತಪಡಿಸಲಾಗಿದೆ. ಈ ಯೋಜನೆಯಡಿ ನೌಕರರು ತಮ್ಮ ಪಾಲಿನ ವಿಮಾ ಮೊತ್ತ ಮತ್ತು ಅದಕ್ಕೆ ಸಮಾನವಾದ ಮೊತ್ತವನ್ನು ಪಾಲಿಕೆಗಳು ಭರಿಸುವ ಸಾಧಕ-ಭಾದಕಗಳ ಬಗ್ಗೆ ಪರಿಶೀಲಿಸಲಾಗುತ್ತದೆ. ಇದಲ್ಲದೇ, ನೌಕರರ ಚಿಕಿತ್ಸಾ ವೆಚ್ಚವನ್ನು ಮಂಜೂರು ಮಾಡುವ ಅಧಿಕಾರವನ್ನು ಆಯಾ ಪಾಲಿಕೆಗಳ ಆಯುಕ್ತರಿಗೆ ನೀಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಪ್ರಕಟಿಸಿದರು.

ಮುಷ್ಕರ ವಾಪಸ್‌‍ಬಹುತೇಕ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಷಡಕ್ಷರಿ ಮತ್ತು ಅಮೃತರಾಜ್‌ ಅವರು ಸಚಿವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.ಈ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್‌ ಮತ್ತು ಪೌರಾಡಳಿತ ನಿರ್ದೇಶಕರಾದ ಪ್ರಭುಲಿಂಗ ಕವಳಿಕಟ್ಟಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಇದ್ದರು.

RELATED ARTICLES

Latest News