ಸಹೋದರರನ್ನೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ತಮ್ಮ ಅಂದರ್

ಬೆಂಗಳೂರು, ಜೂ.17- ಒಡಹುಟ್ಟಿದ ಇಬ್ಬರು ಸಹೋದರರನ್ನೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ತಮ್ಮನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜೇಶ್ ಬಂಧಿತ ಕೊಲೆ ಪ್ರಕರಣದ ಆರೋಪಿ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಎಸ್. ಅವರು ಈ ಸಂಜೆಗೆ ತಿಳಿಸಿದ್ದಾರೆ. ಈತ ತನ್ನ ಅಣ್ಣಂದಿರಾದ ಸಹದೇವ ಮತ್ತು ದಂಡಪಾಣಿ ಎಂಬುವರ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದನು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡು ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ನಾಗರಬಾವಿ ಮುಖ್ಯರಸ್ತೆಯ ನಮ್ಮೂರ ತಿಂಡಿ ಹೋಟೆಲ್ ಸಮೀಪ ಸದ್ಯ ಅಮೆರಿಕದಲ್ಲಿರುವ ರಾಮೇಗೌಡ ಎಂಬುವರಿಗೆ ಸೇರಿದ ಶಾಪಿಂಗ್ ಕಾಂಪ್ಲೆಕ್ಸ್‍ನ ನೆಲಮಾಳಿಗೆಯ ಕಾಮಗಾರಿ ಸ್ಥಗಿತಗೊಂಡಿದ್ದು, ಈ ಸ್ಥಳದಲ್ಲಿ ಮೂವರು ಸಹೋದರರು ಅಡುಗೆ ಮಾಡಿಕೊಂಡು ಊಟ ಮಾಡಿ ಅಲ್ಲೇ ಮಲಗುತ್ತಿದ್ದರು.

ಕಳೆದ ಮೂರು ದಿನಗಳ ಹಿಂದೆ ಹಣಕಾಸು ವಿಚಾರದಲ್ಲಿ ಈ ಮೂವರು ಅಣ್ಣ-ತಮ್ಮಂದಿರ ಮಧ್ಯೆ ಜಗಳವಾಗಿದೆ. ಈ ಸಂದರ್ಭದಲ್ಲಿ ಆರೋಪಿ ರಾಜೇಶ ತನ್ನಿಬ್ಬರು ಅಣ್ಣಂದಿರ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ.

ನಂತರ ಇನ್ನೊಬ್ಬ ಅಣ್ಣನಿಗೆ ಮೊಬೈಲ್ ಕರೆ ಮಾಡಿ ಅಣ್ಣ-ತಮ್ಮಂದಿರ ಮಧ್ಯೆ ಜಗಳವಾಗಿದೆ. ಹೋಗಿ ನೋಡಿ ಎಂದು ಹೇಳಿದ್ದಾನೆ. ಈತನ ಅಣ್ಣ ಸ್ಥಳಕ್ಕೆ ಹೋಗಿ ನೋಡಿದಾಗ ಸಹೋದರರು ಕೊಲೆಯಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೆÇಲೀಸರು ಆರೋಪಿಯನ್ನು ಬಂಧಿಸಿದ್ದಾರೆ.