ಬೆಂಗಳೂರು,ಡಿ.29- ಕೋಲಾರದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿ ಕಳೆದ 19 ದಿನಗಳಿಂದ ಸೂತಕದ ಛಾಯೆಯಲ್ಲಿದ್ದ ಕಡಲ ಕಿನಾರೆ ಮುರಡೇಶ್ವರ ಈಗ ಪ್ರವಾಸಿಗರಿಗೆ ಮುಕ್ತವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ಶಾಲಾ ಪ್ರವಾಸಕ್ಕೆ ಬಂದಿದ್ದಾಗ ನಾಲ್ವರು ವಿದ್ಯಾರ್ಥಿನಿ ಸಾವನ್ನಪ್ಪಿದ್ದರು. ಇದರಿಂದ ಕಡಲತೀರಕ್ಕೆ ಬರುವ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು.
ಮುರುಡೇಶ್ವರ ಕಡಲತೀರಕ್ಕೆ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ ಪ್ರವಾಸಿಗರಿಗೆ ನಿಷೇಧ ಇದ್ದರಿಂದ ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿ ವಾಪಸ್ ಆಗುತ್ತಿದ್ದರು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಕೆಲ ಮುಂಜಾಗೃತಾ ಕ್ರಮಗಳೊಂದಿಗೆ ಇಂದಿನಿಂದ ಕಡಲ ಕಿನಾರೆಯನ್ನು ಪ್ರವಾಸಿಗರಿಗೆ ಮುಕ್ತಗೊಳಿಸಿದೆ.
ಇದೀಗ ಕಡಲತೀರದಲ್ಲಿ ಡೇಂಜರ್ ಜೋನ್ ಮತ್ತು ಸೇಫ್ ಜೋನ್ ಎಂದು ಎರಡು ವಿಭಾಗ ಮಾಡಿದೆ. ಜಿಲ್ಲಾಡಳಿತ ಗುರುತಿಸಿದ ಸೇಫ್ ಜೋನ್ನಲ್ಲಿ ಮಾತ್ರ ಪ್ರವಾಸಿಗರು ಈಜಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಸಿಗರಿಗೆ ಮುಕ್ತ ಅವಕಾಶ ಸಿಕ್ಕರೂ ಕೂಡಾ ಜಿಲ್ಲಾಡಳಿತ ಗೊತ್ತುಪಡಿಸಿದ ಜಾಗದಲ್ಲೆ ಈಜಾಡಿ ಮಜಾ ಮಾಡಬಹುದು. ಸ್ವಲ್ಪ ಜಾಗರೂಕತೆ ತಪ್ಪಿದರೂ ಮತ್ತೆ ಅನಾಹುತ ಸಂಭವಿಸುವ ಸಾಧ್ಯತೆ ಇದ್ದು, ಪ್ರವಾಸಿಗರೂ ಕೂಡ ಮುಂಜಾಗೃತೆ ವಹಿಸುವುದು ಅಗತ್ಯವಿದೆ ಎಂದು ಜಿಲ್ಲಾಡಳಿತ ಎಚ್ಚರಿಸಿದೆ.