ಬೆಂಗಳೂರು, ಏ.15- ನಗರದ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ಪ್ರಮುಖ ಆರೋಪಿಗಳಾದ ಮುಸಾವೀರ್ ಹುಸೇನ್ ಶಾಜಿಬ್ ಮತ್ತು ಅಬ್ದುಲ್ ಮತಿನ್ ತಾಹ ಈ ಹಿಂದೆ ಬೆಂಗಳೂರು ನಗರದಲ್ಲಿ ಕೆಲವು ದಿನಗಳ ಕಾಲ ತಂಗಿದ್ದರು ಎಂಬುದು ಎನ್ಐಎ ತನಿಖೆಯಿಂದ ಗೊತ್ತಾಗಿದೆ. ಈ ಇಬ್ಬರು ಭಯೋತ್ಪಾದಕ ಸಂಘಟನೆಯಾದ ಐಸಿಎಸ್ ಜೊತೆ ಸಂಪರ್ಕ ಹೊಂದಿದ್ದರು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಇವರು ಐಸಿಎಸ್ ಜೊತೆ ನೇರ ನಂಟು ಹೊಂದಿದ್ದ ಮೆಹಬೂಬ್ ಪಾಷಾನ ಜೊತೆ ಸತತ ಸಂಪರ್ಕದಲ್ಲಿದ್ದರು. ಮೆಹಬೂಬ್ ಪಾಷಾ 2020 ರಲ್ಲಿ ಬೆಂಗಳೂರಿಗೆ ಬಂದು ತಮ್ಮ ಹೆಸರನ್ನು ಬದಲಿಸಿಕೊಂಡು ಸುದ್ದಗುಂಟೆ ಪಾಳ್ಯದ ಸೂರ್ಯಸಿಟಿ ರೆಸಿಡೆನ್ಸಿಯ 2ನೇ ಮಹಡಿಯಲ್ಲಿ ಬಾಡಿಗೆಗೆ ಮನೆ ಪಡೆದು ವಾಸವಾಗಿದ್ದುದ್ದು ಎನ್ಐಎ ವಿಚಾರಣೆಯಿಂದ ಗೊತ್ತಾಗಿದೆ.
ಒಂದು ವರ್ಷಕ್ಕೂ ಹೆಚ್ಚು ಕಾಲ ನಗರದಲ್ಲಿ ವಾಸವಾಗಿದ್ದುಕೊಂಡು ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಆರೋಪಿ ಮೆಹಬೂಬ್ ಪಾಷಾ ಸಾಮಾಜಿಕ ಕಾರ್ಯ ಮಾಡುವ ನಿಟ್ಟಿನಲ್ಲಿ ನಗರದಲ್ಲಿ ಅಲ್ ಹಿಂದ್ ಐಸಿಸ್ ಹೆಸರಿನಲ್ಲಿ ಎನ್ಜಿಒ ಸ್ಥಾಪನೆ ಮಾಡಲು ಮುಂದಾಗಿದ್ದಲ್ಲದೇ ಈ ಸಂಸ್ಥೆ ಮೂಲಕ ಮುಸ್ಲಿಂ ಯುವಕರನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.
ಗುರುಪ್ಪನಪಾಳ್ಯದ ಮನೆಯೊಂದರಲ್ಲಿ ಶಂಕಿತ ಉ್ರಗರ ಜೊತೆ ಆರೋಪಿ ಮೆಹಬೂಬ್ ಪಾಷಾ ಸಭೆಗಳನ್ನು ನಡೆಸುತ್ತಿದ್ದಾಗ ಈ ಇಬ್ಬರು ಉಗ್ರರು ಭಾಗಿಯಾಗಿದ್ದರು ಎಂಬುವುದು ತಿಳಿದು ಬಂದಿದೆ. ಅಂದು ಸಿಸಿಬಿ ಪೊಲೀಸರು ಮತ್ತು ಗುಪ್ತ ದಳದ ಅಧಿಕಾರಿಗಳು ಮೆಹಬೂಬ್ ಪಾಷಾ ಮನೆ ಮೇಳೆ ದಾಳಿ ಮಾಡಿದಾಗ ಪಾಷ ಸೇರಿದಂತೆ ಹಲವರನ್ನು ಬಂಧಿಸಿದ್ದರು.
ಆ ಸಂದರ್ಭದಲ್ಲಿ ಈ ಇಬ್ಬರು ಉಗ್ರರು ತಲೆ ಮರೆಸಿಕೊಂಡಿದ್ದರು. ಸಭೆಯಿಂದ ಪ್ರೇರೆಪಣೆಗೊಂಡಿದ್ದ ಈ ಇಬ್ಬರು ಉಗ್ರರು ಶಿವಮೊಗ್ಗದಲ್ಲಿ ದುವಾ ಎಂಬ ಹೆಸರಿನಲ್ಲಿ ಎನ್ಜಿಒ ಸಂಸ್ಥೆ ತೆರೆದು ಸಾಮಾಜಿಕ ಸೇವೆ ಹೆಸರಿನಲ್ಲಿ ಮುಸ್ಲಿಂ ಯುವಕರನ್ನು ಒಟ್ಟುಗೂಡಿಸಿ ಜಿಹಾದಿ ಬೋಧಿಸುತ್ತಿದ್ದರು.
2021ರಲ್ಲಿ ತಲೆ ಮರೆಸಿಕೊಂಡಿದ್ದ ಈ ಇಬ್ಬರು ಉಗ್ರರು ಮಾ.1ರಂದು ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿ ಪಶ್ಚಿಮ ಬಂಗಾಳ ಕೋಲ್ಕತಾದಲ್ಲಿ ಅಡಗಿ ಕುಳಿತಿದ್ದರು. ಎನ್ಐಎ ಅಧಿಕಾರಿಗಳಿಗೆ ಇದೀಗ ಈ ಇಬ್ಬರು ಉಗ್ರರು ಸಿಕ್ಕಿಬಿದ್ದಿದ್ದು ಹಲವು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.