Friday, November 22, 2024
Homeಜಿಲ್ಲಾ ಸುದ್ದಿಗಳು | District News"ನನ್ನ ಮಗ ಲೋ ಬಿಪಿಯಿಂದಾಗಿ ಮೃತಪಟ್ಟಿದ್ದಾನೆ, ಪೊಲೀಸರ ವಿರುದ್ಧ ಆರೋಪ ಮಾಡಲ್ಲ" : ಆದಿಲ್‌ ತಂದೆ

“ನನ್ನ ಮಗ ಲೋ ಬಿಪಿಯಿಂದಾಗಿ ಮೃತಪಟ್ಟಿದ್ದಾನೆ, ಪೊಲೀಸರ ವಿರುದ್ಧ ಆರೋಪ ಮಾಡಲ್ಲ” : ಆದಿಲ್‌ ತಂದೆ

ದಾವಣಗೆರೆ, ಮೇ 25- ಲೋ ಬಿಪಿಯಿಂದಾಗಿ ತಮ್ಮ ಪುತ್ರ ಸಾವನ್ನಪ್ಪಿದ್ದು, ಅನಗತ್ಯವಾಗಿ ನಾನು ಪೊಲೀಸರ ವಿರುದ್ಧ ಆರೋಪ ಮಾಡಲು ಬಯಸುವುದಿಲ್ಲ ಎಂದು ಚನ್ನಗಿರಿ ನಿವಾಸಿ ಕರೀಂ ಉಲ್ಲಾ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪುತ್ರ ಆದಿಲ್‌ ಬಡಗಿ ಕೆಲಸ ಮಾಡುತ್ತಿದ್ದ. ದೇವರ ವಿಗ್ರಹಗಳನ್ನು ನಿರ್ಮಿಸುತ್ತಿದ್ದ. ವಿನ್ಯಾಸಕಾರನಾಗಿದ್ದ ಆತನಿಗೆ ದಿನಕ್ಕೆ 2 ಸಾವಿರ ರೂ. ಸಂಬಳ ಸಿಗುತ್ತಿತ್ತು. ನಮ್ಮ ಮನೆಯ ಹತ್ತು ಜನರನ್ನು ಸಾಕುತ್ತಿದ್ದ ಎಂದು ಹೇಳಿದ್ದಾರೆ.

ಆತನ ಸಾವಿಗೆ ಕಾರಣ ಗೊತ್ತಿಲ್ಲ. ನಾನು ಅನಗತ್ಯವಾಗಿ ಪೊಲೀಸರ ಮೇಲೆ ದೂರಲು ಬಯಸುವುದಿಲ್ಲ. ಮೃತ ದೇಹದ ಮೇಲೆ ಹಲ್ಲೆಯ ಗುರುತುಗಳನ್ನು ನಾನು ಗಮನಿಸಲಿಲ್ಲ. ಹೆಚ್ಚಿನ ವಿವರಗಳನ್ನು ಹೇಳಲು ನಾನು ವೈದ್ಯನಲ್ಲ. ಅನಕ್ಷರಸ್ಥ. ಹಮಾಲಿ ಕೆಲಸ ಮಾಡಿ ಮಕ್ಕಳನ್ನು ಸಾಕಿ ಓದಿಸಿದೆ. ಈಗ ಬೆಳೆದ ಮಗನನ್ನು ಕಳೆದುಕೊಂಡಿದ್ದೇನೆ. ಪರಿಹಾರ ಕೊಡಿ ಎಂದು ಕೇಳಿಕೊಳ್ಳುತ್ತೇನೆ ಎಂದರು.

ನಮ್ಮ ಮಗನ ಹೆಣವನ್ನು ಇಟ್ಟುಕೊಂಡು ಪೊಲೀಸ್‌‍ ಠಾಣೆಗೆ ಕಲ್ಲು ಹೊಡೆಯಲು ಸಾಧ್ಯವೇ? ಸಾವಿನ ಮನೆಯಲ್ಲಿದ್ದವರು ಯಾರಾದರೂ ಈ ಕೆಲಸ ಮಾಡಲು ಆಗುತ್ತದೆಯೇ? ನಾವು, ನಮ್ಮ ಸಂಬಂಧಿಕರು, ನಮ್ಮ ಅಣ್ಣ-ತಮಂದಿರು ಎಲ್ಲರೂ ಪೊಲೀಸ್‌‍ ಠಾಣೆ ಒಳಗಡೆ ಇದ್ದೆವು. ಹೊರಗಡೆ ಯಾರು ಕಲ್ಲು ಹೊಡೆದಿದ್ದಾರೋ ಗೊತ್ತಿಲ್ಲ, ಕುಡುಕರು ಮಾಡಿರುವ ಕೆಲಸಕ್ಕೆ ನಮ್ಮ ಹೆಸರು ಹೇಳುವುದು ಸರಿಯಲ್ಲ ಎಂದು ಹೇಳಿದರು.

ನನ್ನ ಮಗ ಓಸಿ ಬರೆಯುವಂತಹ ಕೆಲಸ ಮಾಡುತ್ತಿರಲಿಲ್ಲ. ಆತನನ್ನು ಬೆಳೆಸಿ, ಮದುವೆ ಮಾಡಿದ ನನಗೆ ಅವನ ಇತಿಹಾಸ ಗೊತ್ತು. ಆತನಿಗೆ ಮೂರು ಮಕ್ಕಳಿವೆ. ಯಾವುದೇ ಖಾಯಿಲೆ ಇರಲಿಲ್ಲ. ಮೂರ್ಛೆರೋಗದಿಂದ ಮೃತಪಟ್ಟಿದ್ದಾನೆ ಎಂಬುದು ಸರಿಯಲ್ಲ. ಲೋ ಬಿಪಿಯಿಂದಾಗಿ ಸಾವನ್ನಪ್ಪಿರಬಹುದು ಎಂದು ಹೇಳಿದ್ದಾರೆ.

ಪೊಲೀಸ್‌‍ ಠಾಣೆಗೆ ಕರೆದುಕೊಂಡು ಬಂದ 10 ನಿಮಿಷದೊಳಗಾಗಿಯೇ ಕುಸಿದು ಮೃತಪಟ್ಟಿದ್ದಾನೆ. ಮುಂದೆ ನಾವೂ ಸಾಯುತ್ತೇವೆ, ಇನ್ನೊಬ್ಬರ ಮೇಲೆ ದೂರು ಹೇಳಿ ಪಾಪ ಮಾಡಲು ಬಯಸುವುದಿಲ್ಲ ಎಂದಿದ್ದಾರೆ.

RELATED ARTICLES

Latest News