ಬೆಂಗಳೂರು,ಏ.29– ಉಗ್ರರು ಧರ್ಮ ಕೇಳಿ ಗುಂಡು ಹೊಡೆದಿಲ್ಲ ಎಂದು ನಾನು ಹೇಳಿಲ್ಲ, ನನ್ನ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಯೂಟರ್ನ್ ಪಡೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನೀಡಿದ ಹೇಳಿಕೆಯಲ್ಲಿ ಖಡಾಖಂಡಿತವಾಗಿ ಧರ್ಮ ಕೇಳಿ ಹೊಡೆದಿಲ್ಲ ಎಂದು ನಾನು ಹೇಳಿರಲಿಲ್ಲ. ನಾನು ನೋಡಿದ ಚಾನೆಲ್‌ಗಳಲ್ಲಿ ಧರ್ಮ ಕೇಳಿ ಹೊಡೆದಿದ್ದಾರೆ ಎಂದು ಬಂದಿರಲಿಲ್ಲ. ಅದಕ್ಕಷ್ಟೇ ನಾನು ಅನುಮಾನ ವ್ಯಕ್ತಪಡಿಸಿದೆ. ನನ್ನ ಹೇಳಿಕೆಯನ್ನು ಮುಂದಿಟ್ಟುಕೊಂಡು ಭಯೋತ್ಪಾದನೆಗೆ ಬೆಂಬಲ ನೀಡಲಾಗುತ್ತಿದೆ ಎಂಬರ್ಥದಲ್ಲಿ ಬಿಂಬಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಯೋತ್ಪಾದನೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಪಹಲ್ಗಾಮ್‌ನಲ್ಲಿ ಸ್ಥಳೀಯರು ಪ್ರವಾಸಿಗರಿಗೆ ರಕ್ಷಣೆ ನೀಡಿದ್ದಾರೆ. ಭದ್ರತಾ ವೈಫಲ್ಯ ಸ್ಪಷ್ಟವಾಗಿ ಕಂಡುಬರುತ್ತಿದೆ. ಉಳಿದಂತೆ ಪಕ್ಷ, ಪಂಗಡ ಬಿಟ್ಟು ಇಂತಹ ಪರಿಸ್ಥಿತಿಯಲ್ಲಿ ಒಟ್ಟಾಗಿ ನಿಲ್ಲಬೇಕೇ ಹೊರತು ಸಣ್ಣಪುಟ್ಟ ವಿಚಾರಗಳನ್ನು ಮುಂದಿಟ್ಟುಕೊಂಡು ಚರ್ಚೆ ಮಾಡುವುದು ಒಳ್ಳೆಯದಲ್ಲ ಎಂದರು.
ಕಾರವಾರದಲ್ಲಿ ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ ಎಂದು ವ್ಯಾಪಕವಾಗಿ ಪ್ರಚಾರ ಮಾಡಿದರು. ಆದರೆ ನಂತರದಲ್ಲಿ ಅದೊಂದು ಸಹಜ ಸಾವು ಎಂದು ವರದಿ ಬಂದಿದೆ. ಬಿಜೆಪಿಯವರು ಇದೇ ರೀತಿ ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂಗಳೆಂದು ಧರ್ಮ ಕೇಳಿ ಕೊಲೆ ಮಾಡಿಲ್ಲ ಎಂದು ನಾನು ಹೇಳಿಲ್ಲ ಎಂಬುದಾಗಿ ಪದೇಪದೇ ಪುನರುಚ್ಚರಿಸಿದ್ದೇನೆ. ಪಹಲ್ಗಾಮ್ ದಾಳಿಯ ಬಳಿಕ ಯುದ್ಧ ಬೇಕೇ?, ಬೇಡವೇ? ಎಂಬುದನ್ನು ಪ್ರಧಾನಿಯವರು ನಿರ್ಧರಿಸಲಿ ಎಂದು ಹೇಳಿದರು.
ದೇಶದ ಭದ್ರತೆಗೆ ಅಪಾಯ ಬಂದಾಗ ಯುದ್ಧ ಮಾಡದೇ ಇನ್ನೇನು ಮಾಡಲು ಸಾಧ್ಯ. ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿಯವರು ಟೀಕಿಸುವುದು ರಾಜಕೀಯ ಕಾರಣಕ್ಕಾಗಿ. ನಾಗರಿಕರು ಮತ್ತು ಪ್ರವಾಸಿಗರ ಮೇಲೆ ದಾಳಿಯಾಗಿ ಹತ್ಯೆಗಳಾಗಿವೆ. ಈಗ ಹೋಗಿ ನಾವು ಅವರನ್ನು ಹೊಡೆದೆವು, ಇವರನ್ನು ಹೊಡೆದೆವು ಎಂದು ಕೊಚ್ಚಿಕೊಳ್ಳುತ್ತಿದ್ದಾರೆ. ಪುಲ್ವಾಮ ಬಳಿಕ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಸಣ್ಣಪುಟ್ಟ ವಿಚಾರಗಳನ್ನು ಬದಿಗಿರಿಸಿ ದೇಶದ ಹಿತದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಲು ಹೋಗಿದ್ದರು ಎಂಬುದು ಸರಿಯಲ್ಲ. ಪೊಲೀಸ್ ಅಧಿಕಾರಿಗೇ ಹೊಡೆಯಲು ಹೋಗಿದ್ದರು ಎಂದು ಹೇಗೆ ಹೇಳಲು ಸಾಧ್ಯ. ತಪ್ಪು ವ್ಯಾಖ್ಯಾನಗಳನ್ನು ಮಾಡಬಾರದು.
ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆಯುಷ್ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿರಲಿಲ್ಲವೇ?, ನಮ ಮುಂದೆ ಇಂತಹ ಹಲವು ಉದಾಹರಣೆಗಳಿವೆ. ಆವೇಶದಲ್ಲಿ ಮಾಡಿದ್ದರೂ ಮಾಡಿರಬಹುದು ಎಂದರು.ದೇಶದ ಭದ್ರತಾ ದೃಷ್ಟಿಯಿಂದ ಪ್ರಧಾನಮಂತ್ರಿಯವರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ ಎಂದು ಮತ್ತೊಮೆ ಆಗ್ರಹಿಸಿದರು.