ನೇಪಿಟಾವ್/ಬ್ಯಾಂಕಾಕ್,ಮಾ.29- ಮ್ಯಾನ್ಮಾರಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಸುಮಾರು 1000 ಕ್ಕೆ ಏರಿಕೆಯಾಗಿದ್ದು, ಈ ವರೆಗೂ 1,700 ಜನರು ಗಾಯಗೊಂಡಿದ್ದಾರೆ ಎಂದು ದೇಶದ ಆಡಳಿತಾರೂಢ ಜುಂಟಾ ಸರ್ಕಾರ ತಿಳಿಸಿದೆ. ಭೂಕಂಪದಿಂದ ಉಂಟಾದ ಸಾವು ನೋವಿನ ಬಗ್ಗೆ ನಿಖರ ಮಾಹಿತಿ ಇನ್ನೂ ಸಿಕ್ಕಿಲ್ಲ, ಜನರ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಶುಕ್ರವಾರದಿಂದ 6 ಬಾರಿ ಭೂಕಂಪ ಸಂಭವಿಸಿದ್ದು, ಸಾವಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಅವಶೇಷಗಳ ಆಡಿ ಇನ್ನೂ ನೂರಾರು ಮಂದಿ ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾವಿಸಿರುವ ರಕ್ಷಣಾ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.
ಮತ್ತೊಂದೆಡೆ ಜೀವ ಉಳಿಸಬೇಕಾದ ಆಸ್ಪತ್ರೆಗಳೇ ಕಣ್ಣೀರಿನ ಕಥೆ ಹೇಳುತ್ತಿವೆ. ಸಾವಿರಾರು ಹಾಸಿಗೆ ಸೌಲಭ್ಯ ಹೊಂದಿರುವ ಆಸ್ಪತ್ರೆಗಳು ನಾಮಾವಶೇಷವಾಗಿದ್ದು, ನೊಂದ ಸಂತ್ರಸ್ತರಿಗೆ ರಸ್ತೆಯಲ್ಲೇ ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ಬಂದೊದಗಿವೆ. ಇದರಿಂದ ಮ್ಯಾನ್ಯಾರ ನೈಪಿತಾವು ಸೇರಿ 6 ಪ್ರದೇಶ ಹಾಗೂ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.





ಪ್ರಬಲ ಭೂಕಂಪದಲ್ಲಿ ಕಟ್ಟಡಗಳು, ಸೇತುವೆಗಳು, ರಸ್ತೆಗಳು, ಸಾರ್ವಜನಿಕ ಆಸ್ತಿಪಾಸ್ತಿಗಳು ನಾಶವಾಗಿದೆ. ಅನೇಕ ಸಾವು-ನೋವುಗಳು ವರದಿಯಾಗಿದೆ. ಭೂಕಂಪಕ್ಕೆ ಸಂಬಂಧಪಟ್ಟ ಫೋಟೋ-ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ದೃಶ್ಯಗಳು ಭಯಾನಕವಾಗಿವೆ.
ತುರ್ತು ಪರಿಸ್ಥಿತಿ ಘೋಷಣೆ
ಇದೇ ಸಮಯದಲ್ಲಿ ದಿಢೀರ್ ಥಾಯ್ಲೆಂಡ್ ರಾಜಧಾನಿಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಮ್ಯಾನ್ಮಾರ್ ಮತ್ತು ಫಾಯ್ಲೆಂಡ್ ದೇಶಗಳ ಪರಿಸ್ಥಿತಿ ಇಂದು ಬೆಳಗ್ಗೆ ಚೆನ್ನಾಗಿಯೇ ಇತ್ತು. ಜನರು ಕೂಡ ಸಾಮಾನ್ಯ ದಿನದಂತೆ ತಮ್ಮ ಚಟುವಟಿಕೆ ನಡೆಸುತ್ತಿದ್ದರು. ಆದರೆ ದಿಢೀರ್ ಏನಾಯೋ ಅಂತಾ ತಿಳಿಯದೆ ಜನರು ಕಟ್ಟಡಗಳನ್ನು ಬಿಟ್ಟು ಹೊರಗೆ ಓಡಿ ಬಂದಿದ್ದಾರೆ. ಹಾಗೇ ಇನ್ನೂ ಕೆಲವರು ರಸ್ತೆಯಲ್ಲಿ ತೆರಳುವ ಸಮಯದಲ್ಲಿ ಜೀವ ಉಳಿಸಿಕೊಳ್ಳಲು ಪರದಾಡಿದ್ದಾರೆ.
ಹೀಗೆ ನೋಡ ನೋಡುತ್ತಲೇ ಭೀಕರ ಭೂಕಂಪನ ಎಲ್ಲವನ್ನೂ ಅಲ್ಲೋಲ ಕಲ್ಲೋಲ ಮಾಡಿ ಹಾಕಿದೆ. ಇಂದು ಮಧ್ಯಾಹ್ನ ಮ್ಯಾನ್ಮಾರ್ನಲ್ಲಿ 7.7 ತೀವ್ರತೆ ಪ್ರಬಲ ಭೂಕಂಪನ ಸಂಭವಿಸಿದೆ ಎಂಬ ಸತ್ಯ ಆ ನಂತರ ಜನರಿಗೆ ಗೊತ್ತಾಗಿದೆ. ಭೂಮಿ ಕಂಪಿಸಿದ ರೀತಿ ನೋಡಿ ಇಡೀ ಜಗತ್ತೇ ಬೆಚ್ಚಿಬಿದ್ದಿದ್ದು, ಮ್ಯಾನ್ಮಾರ್ ಥಾಯ್ಲೆಂಡ್ ದೇಶಗಳ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಈಗ ಸಮಯ ಕಳೆಯುತ್ತಿದ್ದಾರೆ.
ಸಾವಿನ ಸಂಖ್ಯೆ ಈಗಾಗಲೇ 100 ದಾಟಿದ್ದು, 350 ಜನರು ಮ್ಯಾನ್ಮಾರ್ ದೇಶ ಒಂದರಲ್ಲೇ ಜೀವವನ್ನು ಕಳೆದುಕೊಂಡಿದ್ದಾರೆ. ಮತ್ತೊಂದು ಕಡೆ ಬ್ಯಾಂಕಾಕ್ ಕೂಡ ಭೀಕರ ಭೂಕಂಪನ ಹಿನ್ನೆಲೆಯಲ್ಲಿ ನಲುಗಿದ್ದು, ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಥಾಯ್ಲೆಂಡ್ ಸರ್ಕಾರ ಆಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡಿದೆ.
ಕರೆ ಮಾಡಲು ಸೂಚನೆ: ಥೈಲ್ಯಾಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಬ್ಯಾಂಕಾಕ್ ಮತ್ತು ಥೈಲ್ಯಾಂಡ್‌ನ ಇತರ ಭಾಗಗಳಲ್ಲಿ ಪ್ರಬಲ ಭೂಕಂಪನಗಳು ದಾಖಲಾದ ನಂತರ, ಥಾಯ್ ಅಧಿಕಾರಿಗಳ ಸಮನ್ವಯದೊಂದಿಗೆ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಇಲ್ಲಿಯವರೆಗೆ ಯಾವುದೇ ಭಾರತೀಯ ನಾಗರಿಕರಿಗೆ ತೊಂದರೆಯಾದ ಬಗ್ಗೆ ವರದಿಯಾಗಿಲ್ಲ. ಯಾವುದೇ ತುರ್ತು ಸಂದರ್ಭದಲ್ಲಿ, ಹೈಲ್ಯಾಂಡ್‌ನಲ್ಲಿರುವ ಭಾರತೀಯ ಪ್ರಜೆಗಳು ತುರ್ತು ಸಂಖ್ಯೆ +66 618819218ನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಬ್ಯಾಂಕಾಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಚಿಯಾಂಗ್ ಮಾಯ್ ನಲ್ಲಿರುವ ದೂತಾವಾಸದ ಎಲ್ಲಾ ಸದಸ್ಯರು ಸುರಕ್ಷಿತವಾಗಿದ್ದಾರೆ ಎಂದು ರಾಯಭಾರ ಕಚೇರಿ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ಭಾರತದಿಂದ ನೆರವಿನ ಹಸ್ತ
ಭೂಕಂಪದಿಂದ ಅಪಾರ ಸಾವು-ನೋವು ನಷ್ಟ ಉಂಟಾಗಿರುವ ಮ್ಯಾನ್ಸಾರ್ ಸಹಾಯಕ್ಕೆ ಭಾರತ ಮುಂದಾಗಿದೆ. ಮಾನವೀಯ ನೆರವು ನೀಡಲು ವಿಮಾನವನ್ನು ಕಳುಹಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.
ಹಿಂಡನ್ನಿನಿಂದ ಬಂದ ಭಾರತೀಯ ವಾಯುಪಡೆ ವಿಮಾನ ಖಂಈ ಆ-130ಎ ವಿಮಾನದಲ್ಲಿ ಇಂದು ಎನ್ ಡಿಆರ್ ಎಫ್ ಸಿಬ್ಬಂದಿ ಟೆಂಟ್ಗಳು, ಮಲಗುವ ಚೀಲಗಳು, ಕಂಬಳಿಗಳು, ತಿನ್ನಲು ಸಿದ್ಧವಾದ ಆಹಾರ ಪದಾರ್ಥಗಳು, ನೀರಿನ ಬಾಟಲ್ ಗಳು, ನೈರ್ಮಲ್ಯ ಕಿಟ್‌ಗಳು, ಸೌರ ದೀಪಗಳು, ಜನರೇಟರ್ ಸೆಟ್ ಗಳು ಮಾತ್ರೆಗಳು, ಪ್ರತಿಜೀವಕ ಔಷಧಿಗಳು ಸಿರಿಂಜ್ಗಳು, ಕೈಗವಸುಗಳು, ಹತ್ತಿ ಬ್ಯಾಂಡೇಜ್ಗಳು, ಮೂತ್ರ ಚೀಲಗಳಂತಹ ಅಗತ್ಯ ಔಷಧ ಸಾಮಗ್ರಿಗಳನ್ನು ಒಳಗೊಂಡಂತೆ 15 ಟನ್ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ. ಅಗತ್ಯ ವಸ್ತುಗಳನ್ನು ಹೊತ್ತ ಸಿ 130 ಮಿಲಿಟರಿ ಸಾರಿಗೆ ವಿಮಾನವನ್ನು ರವಾನಿಸಲಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ.
ಈ ವಿಮಾನದ ಜೊತೆಗೆ ಶೋಧ ಮತ್ತು ರಕ್ಷಣಾ ತಂಡ ಮತ್ತು ವೈದ್ಯಕೀಯ ತಂಡವೂ ಇದೆ ಎಂದು ಅವರು ಹೇಳಿದರು. ನಾವು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಆಗತ್ಯ ಬಿದ್ದರೆ ಇನ್ನಷ್ಟು ನೆರವು ನೀಡುತ್ತೇವೆ ಎಂದು ವಿದೇಶಾಂಗ ಸಚಿವರು ತಿಳಿಸಿದ್ದಾರೆ. ಬ್ಯಾಂಕಾಕ್ ನಗರದಲ್ಲಿ ಕೂಡ ಭಾರಿ ದೊಡ್ಡ ಹಾನಿ ಭೂಕಂಪನ ಪರಿಣಾಮ ಉಂಟಾಗಿದೆ.
ಹೀಗಿದ್ದಾಗ ಸಾಕಷ್ಟು ಗಾಯಾಳುಗಳು ಚಿಕಿತ್ಸೆ ಸಿಗದೆ ಪರದಾಡುತ್ತಿದ್ದು, ಅವರಿಗೆ ಟ್ರೇಟೆಂಟ್ ಕೊಡುವ ಕೆಲಸ ಸಾಗಿದೆ. ಮತ್ತೊಂದು ಕಡೆ ಕುಸಿದು ಬಿದ್ದಿರುವ ಕಟ್ಟಡಗಳ ಕೆಳಗೆ ನೂರಾರು ಜನರು ಸಿಲುಕಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭಯ ಕಾಡುತ್ತಿದೆ. ಆಸ್ಪತ್ರೆಗಳಲ್ಲಿ ಇದೀಗ ಗಾಯಾಳುಗಳ ನರಳಾಟ ಕರುಳುಹಿಂಡುವಂತಿದೆ.