ಮೈಸೂರು,ಮಾ.20- ದಕ್ಷಿಣಕಾಶಿ ನಂಜನಗೂಡಿನಲ್ಲಿ ಮತ್ತೆ ಮಗು ಮಾರಾಟ ಪ್ರಕರಣ ಬೆಳಕಿಗೆ ಬಂದಿದ್ದು, ಕೇವಲ 14 ಸಾವಿರ ರೂ.ಗೆ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಘಟನೆ ನಡೆದಿದೆ.
ನಂಜನಗೂಡಿನ ನೀಲಕಂಠನಗರದ ಅನಿಲ್‌ಕುಮಾರ್ ಹಾಗೂ ಸೌಮ್ಯ ಎಂಬ ದಂಪತಿಯ ಮಗುವನ್ನು ಗುಂಡ್ಲುಪೇಟೆಯ ನಿವಾಸಿಯೊಬ್ಬರಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ದಂಪತಿಗೆ ಜನಿಸಿದ ಎರಡೂ ಮಕ್ಕಳು ಹೆಣ್ಣುಮಕ್ಕಳಿದ್ದು, ಮೂರನೇ ಮಗು ಕೂಡ ಹೆಣ್ಣಾದ ಕಾರಣ ಮಾರಾಟ ಮಾಡಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಿಳಿಸಿದ್ದಾರೆ.
ಕೂಡಲೇ ಅಂಗನವಾಡಿ ಕಾರ್ಯಕರ್ತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳೀಯ ಮುಖಂಡರೊಬ್ಬರನ್ನು ಸಂಪರ್ಕಿಸಿದಾಗ 14 ಸಾವಿರ ರೂ.ಗೆ ಮಗುವನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.
ನಮಗೆ 14 ಸಾವಿರ ಹಣ ಕೊಟ್ಟರೆ ಮಗುವನ್ನು ವಾಪಸ್ ಕೊಡುತ್ತೇನೆ ಎಂದು ಮಗುವನ್ನು ಪಡೆದ ವ್ಯಕ್ತಿ ತಿಳಿಸಿದ್ದಾನೆ. ಮಗುವನ್ನು ನಂಜನಗೂಡಿಗೆ ಕರೆತಂದಾಗ ಪೊಲೀಸರು ಮಧ್ಯಪ್ರವೇಶಿಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಸಮ್ಮುಖದಲ್ಲಿ ವಶಕ್ಕೆ ಪಡೆಯಲಾಗಿದೆ.