ಬೆಂಗಳೂರು,ಜು.12- ಮೈಸೂರಿನ ಮುಡಾದಲ್ಲಿ ನಡೆದಿರುವ ನಿವೇಶನ ಹಂಚಿಕೆ ಅಕ್ರಮ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿಬಿಐ ತನಿಖೆಗೆ ನೀಡಬೇಕೆಂದು ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಸಿ.ಟಿ.ರವಿ, ಮುನಿರತ್ನ ಸೇರಿದಂತೆ ಬಿಜೆಪಿಯ ಬಹುತೇಕ ಎಲ್ಲಾ ಶಾಸಕರು, ಪಕ್ಷದ ಪ್ರಮುಖರು ಮತ್ತಿತರರು ಬೆಂಗಳೂರಿನಿಂದ ಮೈಸೂರು ಚಲೋ ಪ್ರತಿಭಟನೆ ನಡೆಸಿದರು.
ಆದರೆ ವಾಹನಗಳಲ್ಲಿ ಮೈಸೂರಿಗೆ ಹೊರಟಿದ್ದ ಪ್ರತಿಭಟನಾನಿರತರನ್ನು ಪೊಲೀಸರು ರಾಮನಗರ ಸಮೀಪದ ಕಣಮಿಣಿಕೆ ಟೋಲ್ ಬಳಿ ವಶಕ್ಕೆ ಪಡೆದುಕೊಂಡರು.ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನಲ್ಲಿ ಬಿಜೆಪಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಜೆಪಿಯ ಪ್ರಮುಖ ನಾಯಕರನ್ನು ಬಿಜೆಪಿ ಕಚೇರಿ ಮತ್ತು ಮನೆಗಳಲ್ಲೇ ವಶಕ್ಕೆ ಪಡೆಯುವ ಪ್ರಯತ್ನ ನಡೆಸಿದರು.
ಆದರೂ ಪೊಲೀಸರ ಜೊತೆ ವಾಗ್ವಾದ ನಡೆಸಿ ವಾಹನಗಳಲ್ಲಿ ಭಾರಿ ಸಂಖ್ಯೆಯ ಕಾರ್ಯಕರ್ತರು ಮೈಸೂರಿನತ್ತ ಹೊರಟಿದ್ದರು. ಆಗಲೇ ರಸ್ತೆಯಲ್ಲಿ ವಶಕ್ಕೆ ಪಡೆಯಲು ಮುಂದಾಗಿದ್ದ ಪೊಲೀಸರು ಕಣಮಿಣಿಕೆ ಬಳಿ ಬರುತ್ತಿದ್ದಂತೆ ಎಲ್ಲರನ್ನೂ ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದೊಯ್ದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾ ನಿರತರ ನಡುವೆ ಭಾರಿ ಮಾತಿನ ಚಕಮಕಿ ನಡೆದು ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ವಾಹನಗಳು ತೆರಳದಂತೆ ಪೊಲೀಸರು ಟೋಲ್ ಸೇರಿದಂತೆ ಮತ್ತಿತರ ಕಡೆ ಅಡ್ಡಲಾಗಿ ಬ್ಯಾರಿಕೇಡ್ ಹಾಗೂ ಪೊಲೀಸ್ ವಾಹನಗಳನ್ನು ಅಡ್ಡ ನಿಲ್ಲಿಸಿದ್ದರು. ಆದರೂ ಬಿಜೆಪಿ ಕಾರ್ಯಕರ್ತರು ವಾಹನಗಳನ್ನು ತೆರವುಗೊಳಿಸಿ ಮೈಸೂರಿನತ್ತ ಹೊರಡಲು ಪ್ರಯತ್ನ ನಡೆಸಿದರೂ ಪೊಲೀಸರು ಅವಕಾಶ ನೀಡಲಿಲ್ಲ. ತಕ್ಷಣವೇ ಪ್ರತಿಭಟನಾನಿರತ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಸ್‌ಗಳಲ್ಲಿ ಬಲವಂತವಾಗಿ ತುಂಬಿಕೊಂಡು ಠಾಣೆಗೆ ಕರೆದೊಯ್ದರು.
ಇದಕ್ಕೂ ಮುನ್ನ ಪೊಲೀಸರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮುಖಂಡರಾದ ತಮೇಶ್‌ಗೌಡ, ಮುನಿರತ್ನ, ಅಶ್ವತ್ಥ ನಾರಾಯಣ, ಕೃಷ್ಣಪ್ಪ, ನಂದೀಶ್ ರೆಡ್ಡಿ ಸೇರಿದಂತೆ ಹಲವರನ್ನು ಅವರ ನಿವಾಸದ ಬಳಿಯೇ ವಶಕ್ಕೆ ಪಡೆಯಲು ಮುಂದಾಗಿದ್ದರು. ಮನೆಯಿಂದ ಆಚೆ ಬರದಂತೆ ಅವರವರ ನಿವಾಸದ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.