ಮೈಸೂರು,ಮಾ.13– ಪರಿಸರ ಸ್ನೇಹಿ ವಿವಾಹ ಮಹೋತ್ಸವದ ಮೂಲಕ ದಾಂಪತ್ಯ ಜೀವನಕ್ಕೆ ಅಡಿ ಇಟ್ಟ ವಧು-ವರರಿಗೆ ಮಹಾನಗರ ಪಾಲಿಕೆ ವತಿಯಿಂದ ಹಸಿರು ವಿವಾಹ ಪ್ರಮಾಣ ಪತ್ರವನ್ನು ನೀಡಲಾಗಿದೆ.
ಮೈಸೂರಿನಲ್ಲಿ ಬುಧವಾರ ಹಸಿರು ಶಿಷ್ಟಾಚಾರ ಅನುಷ್ಠಾನ ಮೂಲಕ ಪರಿಸರ ಸ್ನೇಹಿ ವಿವಾಹ ಮಹೋತ್ಸವದಲ್ಲಿ ಎಂ. ಸಂಜನಾ ಮತ್ತು ಸಿಎಂ ಶಶಿಕಾಂತ್ ಜೋಡಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಈ ವಿವಾಹ ಮಹೋತ್ಸವದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿರ್ಬಂಧಿಸಲಾಗಿತ್ತು. ಮರುಬಳಕೆಯ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಹಾಗೆಯೇ ಅಲಂಕಾರಕ್ಕೆ ಮರುಬಳಕೆ ವಸ್ತುಗಳನ್ನು ಬಳಸಲಾಗಿತ್ತು.
ಈ ವಿವಾಹ ಮಹೋತ್ಸವದಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ನೀರ್ ಆಸಿಫ್ ಅವರು ಭಾಗವಹಿಸಿ ವಧುವರರಿಗೆ ಹಸಿರು ವಿವಾಹ ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರು ಮಾತನಾಡಿ, ಹೆಚ್ಚಿನ ನಾಗರಿಕರು ತಮ್ಮ ವಿವಿಧ ಸಮಾರಂಭಗಳಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.