Thursday, August 7, 2025
Homeರಾಜ್ಯಮೈಸೂರು ದಸರಾ : ಸಾಂಸ್ಕೃತಿಕ ನಗರಿಯತ್ತ ಗಜ ಪಯಣ ಆರಂಭ

ಮೈಸೂರು ದಸರಾ : ಸಾಂಸ್ಕೃತಿಕ ನಗರಿಯತ್ತ ಗಜ ಪಯಣ ಆರಂಭ

Mysore Dasara: Elephants journey begins towards the cultural city

ಹುಣಸೂರು,ಆ.4- ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಜಂಬೂಸವಾರಿಗೆ ಮುನ್ನಡಿಯಾಗಿರುವ ಗಜ ಪ್ರಯಾಣಕ್ಕೆ ಇಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಬಾಗಿಲು ವೀರನಹೊಸಹಳ್ಳಿ ಬಳಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಮೊದಲ ತಂಡದ 9 ಆನೆಗಳಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆಯೊಂದಿಗೆ ಗಜ ಪ್ರಯಾಣ ಆರಂಭವಾಯಿತು. ಮತ್ತಿಗೂಡು ಆನೆ ಶಿಬಿರದ ಅಭಿಮನ್ಯು, ಭೀಮ, ಮಹೇಂದ್ರ, ಏಕಲವ್ಯ, ಬಳ್ಳೆ ಶಿಬಿರದ ಲಕ್ಷ್ಮಿ, ದುಬಾರೆ ಆನೆ ಶಿಬಿರದ ಪ್ರಶಾಂತ, ಧನಂಜಯ, ಕಂಜನ್‌ ಹಾಗೂ ಕಾವೇರಿ ಆನೆಗಳಿಗೆ ಅಲಂಕಾರ ಮಾಡಿ ಮಧ್ಯಾಹ್ನ 12.34ರಿಂದ 12.59ರ ಶುಭ ಮುಹೂರ್ತದಲ್ಲಿ ಗಜಪಡೆಗಳಿಗೆ ಪೂಜೆ ಸಲ್ಲಿಸುವುದರೊಂದಿಗೆ ಪ್ರಯಾಣ ಆರಂಭವಾಯಿತು.

ವೀರನಹೊಸಹಳ್ಳಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಬಾಗಿಲನ್ನು ಇಂದು ಮದುವಣಗಿತ್ತಿಯಂತೆ ಶೃಂಗಾರ ಮಾಡಲಾಗಿತ್ತು. ರಸ್ತೆಯುದ್ದಕ್ಕೂ ಗಜ ಪಯಣದ ನಾಮಫಲಕಗಳು ರಾರಾಜಿಸುತ್ತಿದ್ದವು. ಜಾನಪದ ಕಲಾತಂಡಗಳು ಗಜ ಪಯಣಕ್ಕೆ ಮತ್ತಷ್ಟು ಮೆರಗು ನೀಡಿದವು.

ವಿಶೇಷವಾಗಿ ವೀರನಹೊಸಹಳ್ಳಿ ಸಮೀಪ ಪನರ್ವಸತಿಗೊಂಡಿರುವ ಟಿಬೇಟಿಯನ್‌ ನಿರಾಶ್ರಿತ ಗ್ರಾಮದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿಂದ ನಡೆದ ಟಿಬೇಟಿಯನ್‌ ಸಾಂಪ್ರದಾಯಿಕ ನೃತ್ಯ, ನಾಗಪುರ ಆಶ್ರಮ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಗಿರಿಜನ ಬುಡಕಟ್ಟು ನೃತ್ಯ, ವೀರನಹೊಸಹಳ್ಳಿ ಆಶ್ರಮ ಶಾಲೆಯ ವಿದ್ಯಾರ್ಥಿಗಳಿಂದ ಸಾಂಪ್ರದಾಯಿಕ ನೃತ್ಯ ಹಾಗೂ ವೀರಗಾಸೆ ನೃತ್ಯ ಗಳು ಕಾರ್ಯಕ್ರಮಕ್ಕೆ ಮೆರಗು ನೀಡಿದವು.

ಆಕರ್ಷಕ ಜಂಬೂ ಸವಾರಿಯಲ್ಲಿ 14 ಆನೆಗಳನ್ನು ಆಯ್ಕೆ ಮಾಡಲಾಗಿದ್ದು, ಮೊದಲ ತಂಡದಲ್ಲಿ 9 ಆನೆಗಳು, 2ನೇ ತಂಡದಲ್ಲಿ 5 ಆನೆಗಳು ಸಾಂಸ್ಕೃತಿಕ ನಗರಿಗೆ ತೆರಳಲಿದ್ದು 2ನೇ ಹಂತದ ಆನೆಗಳನ್ನು ಇನ್ನೂ ಆಯ್ಕೆ ಮಾಡಿಲ್ಲ. 9 ಆನೆಗಳ ಜೊತೆಗೆ ಮಾವುತರು, ಕಾವಾಡಿಗರು, ವಿಶೇಷ ಮಾವುತರು ಹಾಗೂ ಅವರ ಕುಟುಂಬದ ಇತರ ಸದಸ್ಯರು ಲಾರಿಗಳಲ್ಲಿ ಸಾಂಸ್ಕೃತಿಕ ನಗರಿಯತ್ತ ತೆರಳಿದರು.

ಮೈಸೂರಿನ ಅಶೋಕಪುರಂನ ಅರಣ್ಯ ಭವನದಲ್ಲಿ ತಂಗಲಿದ್ದು, ಆ.7ರಂದು ಅರಮನೆ ಆವರಣ ಪ್ರವೇಶಿಸಲಿವೆ. ಶಾಸಕರಾದ ಹರೀಶ್‌ ಗೌಡರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜನೆ ಮಾಡಲಾಗಿದ್ದು, ಸಚಿವರಾದ ಎಚ್‌.ಸಿ.ಮಹದೇವಪ್ಪ, ಶಿವರಾಜ್‌ ತಂಗಡಗಿ, ಕೆ.ವೆಂಕಟೇಶ್‌ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

RELATED ARTICLES

Latest News