ಮೈಸೂರು,ಸೆ.11– ಮದುವೆಯಾಗಿದ್ದರೂ ಸಹ ಬೇರೊಬ್ಬ ಯುವತಿಯೊಬ್ಬಳನ್ನು ಪ್ರೀತಿಸಿ ಕೈಕೊಟ್ಟು ಎರಡಂತಸ್ತಿನ ಮಹಡಿ ಮೇಲಿಂದ ಪ್ರಿಯತಮೆಯನ್ನು ತಳ್ಳಿ ಕೊಲೆಗೆ ಯತ್ನಿಸಿರುವ ಘಟನೆ ದಟ್ಟಗಳ್ಳಿ ಬಡಾವಣೆಯಲ್ಲಿ ನಡೆದಿದೆ.
ಬೆಂಗಳೂರಿನ ಕಾರು ಶೋರೂಂವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಲ್ಬರ್ಟ್ ಎಂಬುವನಿಗೆ ಈಗಾಗಲೇ ಮದುವೆಯಾಗಿದ್ದು, ಸಹದ್ಯೋಗಿ ಯುವತಿಯೊಬ್ಬಳನ್ನು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ. ಒಂದು ವರ್ಷದ ಹಿಂದೆ ಅಲ್ಬರ್ಟ್ ಬೆಂಗಳೂರಿನಿಂದ ಮೈಸೂರಿಗೆ ಬಂದು ನೆಲೆಸಿ ಇಲ್ಲಿಯೂ ಸಹ ಕಾರು ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ.
ನಾಲ್ಕು ತಿಂಗಳ ಹಿಂದೆಯಷ್ಟೇ ಪ್ರಿಯತಮೆಯನ್ನು ಮೈಸೂರಿಗೆ ಕರೆಸಿಕೊಂಡು ವಿಜಯನಗರದ ಮನೆಯೊಂದರಲ್ಲಿ ಇರಿಸಿದ್ದ.ನನ್ನ ಪತ್ನಿಗೆ ವಿಚ್ಛೇದನ ನೀಡಿ ಮದುವೆಯಾಗುತ್ತೇನೆ ಎಂದು ಯುವತಿಗೆ ನಂಬಿಸಿದ್ದ. ಕಳೆದ ಮೂರ್ನಾಲ್ಕು ದಿನಗಳಿಂದ ಅಲ್ಬರ್ಟ್ ಮನೆಗೆ ಬಂದಿರಲಿಲ್ಲ. ಮದುವೆ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಕಾರು ಶೋರೂಂನಲ್ಲಿ ಹೋಗಿ ವಿಚಾರಿಸಿದಾಗಲೂ ಸಹ ಆತ ಅಲ್ಲಿ ಕೂಡ ಇರಲಿಲ್ಲ. ಕೂಡಲೇ ಆತನ ಮನೆಗೆ ಯುವತಿ ತೆರಳಿದಾಗ ಅಲ್ಬರ್ಟ್‌ನ ಪತ್ನಿಯೊಂದಿಗೆ ಈ ವಿಚಾರವಾಗಿ ಜಗಳ ನಡೆದಿದೆ.
ಈ ಸಮಯದಲ್ಲಿ ಅಲ್ಬರ್ಟ್‌ನ ಸಹೋದರ ಹಾಗೂ ಅಲ್ಬರ್ಟ್ ಸ್ಥಳಕ್ಕೆ ಬಂದಾಗ ಪರಿಸ್ಥಿತಿ ವಿಕೋಪಕ್ಕೆ ತೆರಳಿದೆ. ಎರಡನೇ ಮಹಡಿಯಿಂದ ಯುವತಿಯನ್ನು ಕೆಳಕ್ಕೆ ತಳ್ಳಿದ್ದಾನೆ. ಮೇಲಿಂದ ಬಿದ್ದ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಮಹಡಿ ಮೇಲಿಂದ ಕೆಳಗೆ ತಳ್ಳಿದ್ದಾರೆಂದು ಆರೋಪಿಸಿ ಯುವತಿ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.