ಮೈಸೂರು,ಅ.7-ಕಾರನ್ನು ತಡೆದ ಯುವಕರ ಗುಂಪೊಂದು ಹಾಡುಹಗಲೇ ರೌಡಿಯನ್ನು ಕಾರಿನಿಂದ ಹೊರಗೆಳೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ನಡು ರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿರುವ ಘಟನೆ ವಸ್ತು ಪ್ರದರ್ಶನ ಮೈದಾನದ ಬಳಿ ನಡೆದಿದೆ.
ಕ್ಯಾತಮಾರನಹಳ್ಳಿ ನಿವಾಸಿ ವೆಂಕಟೇಶ್ ಅಲಿಯಾಸ್ ಮುಖಾಮುಚ್ಚಿ ಅಲಿಯಾಸ್ ಗಿಲಿಗಿಲಿ ಕೊಲೆಯಾದ ರೌಡಿ.ಇಂದು ಮಧ್ಯಾಹ್ನ ಆತ ಕಾರಿನಲ್ಲಿ ಹೋಗುತ್ತಿದ್ದಾಗ ಯುವಕರ ಗುಂಪೊಂದು ಮೈಸೂರಿನ ವಸ್ತು ಪ್ರದರ್ಶನ ಬಳಿ ಕಾರು ಅಡ್ಡಗಟ್ಟಿ ಆತನನ್ನು ಕಾರಿನಿಂದ ಹೊರಗೆಳೆದು ತಲೆ, ಕೈ,ಕಾಲು ಹಾಗೂ ದೇಹದ ವಿವಿಧ ಭಾಗಗಳ ಮೇಲೆ ಮನ ಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದೆ. ಹಲ್ಲೆಯಿಂದ ನಡು ರಸ್ತೆಯಲ್ಲೇ ರೌಡಿ ವೆಂಕಟೇಶ್ ಕೊನೆಯುಸಿರೆಳೆದಿದ್ದಾರೆ.
ಸುದ್ದಿ ತಿಳಿದು ನಜರ್‌ಬಾದ್‌ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಡಿಸಿಪಿಗಳಾದ ಬಿಂದುಮಣಿ ಹಾಗೂ ಸುಂದರರಾಜ್ ಭೇಟಿ ನೀಡಿದ್ದಾರೆ.
ಇತ್ತೀಚೆಗೆ ವರುಣಾ ಗ್ರಾಮದ ಹೋಟೆಲ್ ಮುಂಭಾಗ ಕ್ಯಾತಮಾರನಹಳ್ಳಿಯ ರೌಡಿ ಶೀಟರ್ ಕಾರ್ತಿಕ್ ಎಂಬಾತನ ಕೊಲೆಗೆ ಪ್ರತಿಕಾರವಾಗಿ ಇಂದು ವೆಂಕಟೇಶ್ ಕೊಲೆ ನಡೆದಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಗಳನ್ನು ಪರಿಶೀಲಿಸಿ, ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ. ಹಾಡುಹಗಲೇ ನಡು ರಸ್ತೆಯಲ್ಲಿ ಭೀಕರ ಕೊಲೆ ಮಾಡಿರುವುದನ್ನು ಕಂಡ ಸಾರ್ವಜನಿಕರು ಭಯಭೀತರಾಗಿದ್ದಾರೆ.