ಮೈಸೂರು,ಜ.4- ಜಾಗವೊಂದರ ವಿವಾದ ವಿಚಾರ ನ್ಯಾಯಾಲಯದಲ್ಲಿ ದಾವೆ ಇದ್ದರೂ ಜಾತಿ ಪ್ರಸ್ತಾಪಿಸಿ ಗ್ರಾಮವನ್ನು ಖಾಲಿ ಮಾಡುವಂತೆ ಕುಟುಂಬವೊಂದಕ್ಕೆ ಬೆದರಿಕೆ ಹಾಕಿರುವ ಘಟನೆ ಮುಖ್ಯಮಂತ್ರಿಗಳ ತವರು ಜಿಲ್ಲೆ ವರುಣಾ ಹೋಬಳಿಯ ಆಶ್ರಮ ಹಂಚೆ ಗುಡುಮಾದನಹಳ್ಳಿಯಲ್ಲಿ ನಡೆದಿದೆ.
ಮಂಗಳಗೌರಿ(49) ಎಂಬುವರ ಕುಟುಂಬಕ್ಕೆ ಇಂತಹ ಬೆದರಿಕೆ ಬಂದಿದ್ದು, ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಗಮ, ಕೋಮಲ ಹಾಗೂ ರಾಘವೇಂದ್ರ ಎಂಬುವರ ವಿರುದ್ದ ಎಫ್‌ಐಆರ್ ದಾಖಲಾಗಿದೆ.ಜಾಗದ ವಿಚಾರದಲ್ಲಿ ಇಬ್ಬರ ನಡುವೆ ವ್ಯಾಜ್ಯವಿದ್ದು ನ್ಯಾಯಾಲಯದಲ್ಲಿ ಒಎಸ್ -120/2023 ಪ್ರಕರಣ ದಾಖಲಾಗಿ ಇನ್ನೂ ಇತ್ಯರ್ಥವಾಗಿಲ್ಲ.
ಇದೇ ವಿಚಾರದಲ್ಲಿ ನಾಗಮ ಅವರ ಮಗಳು ಕೋಮಲ ಹಾಗೂ ಮೊಮಗ ರಾಘವೇಂದ್ರ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ. ಪತಿ ಇಲ್ಲದಿರುವ ಸಮಯದಲ್ಲಿ ಹಲ್ಲೆ ಮಾಡುವುದು, ಕೊಲೆ ಬೆದರಿಕೆ ಹಾಕುವುದು ನಡೆಯುತ್ತಿದೆ ಎಂದು ಮಂಗಳಗೌರಿ ದೂರಿದ್ದಾರೆ.
ಡಿ.31ರ ಸಂಜೆ ಏಕಾಏಕಿ ಮೂವರು ಆರೋಪಿಗಳು ಮನೆ ಬಳಿಗೆ ಬಂದು ಕ್ಯಾತೆ ತೆಗೆದಿದ್ದಾರೆ. ಈ ಗ್ರಾಮದಲ್ಲೀ ನಿಮದೊಂದೇ ಕುಟುಂಬ ಕೀಳು ಜಾತಿಯದು ಎಂದು ನೆಪವೊಡ್ಡಿ ಮಂಗಳಗೌರಿ ಅವರ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನು ಹರಿದುಹಾಕಿ ಕೊಲೆ ಬೆದರಿಕೆ ಹಾಕಿದ್ದಾರೆ.
ಗ್ರಾಮದಿಂದ ತೊಲಗುವಂತೆ ಧಮ್ಕಿ ಹಾಕಿರುವುದರ ಕುರಿತು ಮೊಬೈಲ್‌ನಲ್ಲಿ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿರುವ ಮಂಗಳಗೌರಿ ಅವರು ಮೂವರ ವಿರುದ್ಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಗ್ರಾಮದಲ್ಲಿ ನಮ ಜಾತಿಯವರು ನಾವೊಬ್ಬರೇ ಆಗಿರುವುದರಿಂದ ನಮ ಕುಟುಂಬಕ್ಕೆ ಇಲ್ಲಿ ಯಾವುದೇ ಬೆಂಬಲವಿಲ್ಲ, ಭಯದಲ್ಲಿ ವಾಸವಿದ್ದೇವೆ. ಆದ್ದರಿಂದ ನಮಗೆ ರಕ್ಷಣೆ ಕೊಡಿ ಎಂದು ದೂರಿನಲ್ಲಿ ಕೋರಿದ್ದಾರೆ.
ಜಾತ್ಯಾತೀತ ಹೆಸರಲ್ಲಿ ಅಧಿಕಾರಕ್ಕೆ ಬಂದು ಸಿಎಂ ಗದ್ದುಗೆ ಹಿಡಿದ ಸಿದ್ದರಾಮಯ್ಯ ಅವರ ಸ್ವಕ್ಷೇತ್ರದಲ್ಲೇ ಜಾತಿ ವಿಚಾರದಲ್ಲಿ ಒಂದು ಕುಟುಂಬಕ್ಕೆ ತೊಂದರೆ ಕೊಡುತ್ತಿರುವುದು ವಿಪರ್ಯಾಸ. ಕೂಡಲೇ ಪೊಲೀಸರು ಈ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕಿದೆ.