ಬೆಂಗಳೂರು,ಮಾ.2- ಮೈಸೂರು ವಿಶ್ವವಿದ್ಯಾಲಯವು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಿರುವುದರಿಂದ ವಿಶ್ವವಿದ್ಯಾಲಯಕ್ಕೆ ಕೀರ್ತಿ ಹೆಚ್ಚಿರುವುದರ ಜತೆಗೆ ಮಂಡ್ಯ ಜನರಿಗೆ ಗೌರವ ಸಂದಿದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾಳೆ ನಡೆಯಲಿರುವ 104ನೆ ಮೈಸೂರು ವಿವಿ ಘಟಿಕೋತ್ಸವದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ವಿವಿ ನಿರ್ಧರಿಸಿರುವುದು ಸ್ವಾಗತಾರ್ಹ. ಮೈಸೂರು ವಿವಿಗೆ ವೈಯಕ್ತಿಕವಾಗಿ ಮತ್ತು ಮಂಡ್ಯ ಜನತೆ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದ್ದಾರೆ.
ಮೈಸೂರು ವಿವಿಯ ಹಳೆಯ ವಿದ್ಯಾರ್ಥಿಯಾದ ಎಸ್.ಎಂ.ಕೃಷ್ಣ ಅವರು ಅಮೆರಿಕದ ಟೆಕ್ಸಾಸ್ ರಾಜ್ಯದ ಸದರನ್ ಮೆಥಡಿಸ್ ವಿವಿಯಲ್ಲಿ ಅಂತಾರಾಷ್ಟ್ರೀಯ ಕಾನೂನು ಬಗ್ಗೆ ಉನ್ನತ ಶಿಕ್ಷಣ ಪಡೆದು ವಾಷಿಂಗ್ಟನ್‍ನಲ್ಲಿರುವ ಜಾರ್ಜ್ ವಾಷಿಂಗ್ಟನ್ ವಿವಿಯಲ್ಲಿ ಪ್ರತಿಷ್ಠಿತ ಫುಲ್‍ಬ್ರೈಟ್ ವಿದ್ಯಾರ್ಥಿವೇತನ ಪಡೆದುಕೊಂಡಿದ್ದರು.
ಎಸ್‍ಎಂಕೆ ಅವರು ಆರು ದಶಕಗಳ ಕಾಲ ಸುದೀರ್ಘ ಸಾಮಾಜಿಕ, ರಾಜಕೀಯ ಸೇವೆ ಸಲ್ಲಿಸಿ ಶ್ರೇಷ್ಠ ರಾಜಕಾರಣಿ ಎನಿಸಿಕೊಂಡಿದ್ದಾರೆ. ಅವರ ಸೇವೆ ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮ ವಿಭೂಷಣ ಪ್ರಶಸ್ತಿ ನೀಡಿತ್ತು.
ಕರ್ನಾಟಕ ವಿಧಾನಸಭೆ, ವಿಧಾನ ಪರಿಷತ್, ರಾಜ್ಯಸಭೆ, ಲೋಕಸಭೆ ಹಾಗೂ ವಿಧಾನಸಭಾ ಅಧ್ಯಕ್ಷರಾಗಿ, ಕರ್ನಾಟಕದ ಮುಖ್ಯಮಂತ್ರಿಯಾಗಿ, ಮಹಾರಾಷ್ಟ್ರದ ರಾಜಪಾಲರಾಗಿ, ಕೇಂದ್ರ ಸಚಿವರಾಗಿ ಗಣನೀಯ ಸೇವೆ ಸಲ್ಲಿಸಿದ ಅವರ ಸಾಧನೆಗಳಿಗೆ ಸಂದ ಗೌರವ ಎಂದು ದಿನೇಶ್ ಬಣ್ಣಿಸಿದ್ದಾರೆ.