ಮೈಸೂರು,ಫೆ.16-ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 5 ಹಾಗೂ ವಾರ್ಡ್ ನಂ. 7ರ ವ್ಯಾಪ್ತಿಯಲ್ಲಿ ಬರುವ ಸ್ಮಶಾನ ಗಾಂಜಾ ವ್ಯಸನಿಗಳ ಆವಾಸಸ್ಥಾನವಾಗಿದೆ.
ಹಗಲು ರಾತ್ರಿ ಎನ್ನದೆ ಬೈಕ್ ನಲ್ಲಿ ಬರುವ ವ್ಯಸನಿಗಳು ಸ್ಮಶಾನ ಹಾಗೂ ಅಕ್ಕಪಕ್ಕದಲ್ಲಿರುವ ಪೊದೆಗಳ ಮಧ್ಯದಲ್ಲಿ ಕುಳಿತು ರಾಜಾರೋಷವಾಗಿ ಗಾಂಜಾ ಸೇವನೆ ಮಾಡುತ್ತಿದ್ದಾರೆ. ಈ
ಬಗ್ಗೆ ಸ್ಥಳೀಯರಾದ ಬಿ.ಎನ್.ನಾಗೇಂದ್ರ ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಸ್ಮಶಾನದ ಅಭಿವೃದ್ಧಿಗಾಗಿ ಮೈಸೂರು ಮಹಾನಗರಪಾಲಿಕೆ ಲಕ್ಷಾಂತರ ರೂ. ಖರ್ಚು ಮಾಡಿದೆ. ಹೈ ಮಾಸ್ಕ್ ದೀಪಗಳನ್ನು ಅಳವಡಿಸಿದೆ. ಕಳೆದ ಮೂರು ತಿಂಗಳಿಂದ ಇಲ್ಲಿನ ದೀಪಗಳು ಕೆಟ್ಟು ಹೋಗಿದೆ. ಕತ್ತಲನ್ನೇ ಬಳಸಿಕೊಳ್ಳುತ್ತಿರುವ ಗಾಂಜಾ ವ್ಯಸನಿಗಳು ರಾಜಾರೋಷವಾಗಿ ಸ್ಮಶಾನಕ್ಕೆ ಪ್ರವೇಶಿಸಿ ಧಂ ಎಳೆದು ಮತ್ತೇರಿಸಿಕೊಳ್ಳುತ್ತಿದ್ದಾರೆ.
ಸ್ಮಶಾನದ ಪಕ್ಕದಲ್ಲೇ ಇರುವ ಆಲದ ಮರದ ಕೆಳಗೆ ಹಲವಾರು ಮಂದಿ ಧಂ ಎಳೆಯುತ್ತಾ ಹರಟುವ ದೃಶ್ಯ ಪ್ರತಿನಿತ್ಯ ಕಾಣಿಸುತ್ತಿದೆ. ಪಕ್ಕದಲ್ಲೇ ಹಾದು ಹೋಗಿರುವ ರೈಲ್ವೆ ಹಳಿಯನ್ನೂ ಬಿಡದ ವ್ಯಸನಿಗಳು ಹಳಿ ಮೇಲೇ ಕುಳಿತು ಧಂ ಎಳೆಯುತ್ತಾರೆ.
ಲಕ್ಷಾಂತರ ರೂ. ಖರ್ಚು ಮಾಡಿ ಅಭಿವೃದ್ಧಿಪಡಿಸಿದ ಸ್ಮಶಾನ ನಿರ್ವಹಣೆ ಕೊರತೆಯಿಂದ ಸೊರಗುತ್ತಿದೆ. ಗಾಂಜಾ ವ್ಯಸನಿಗಳನ್ನು ಪ್ರಶ್ನಿಸಿದ ಸಾರ್ವಜನಿಕರ ಮೇಲೆ ಕಲ್ಲು ತೂರಾಟ ನಡೆದ ಪ್ರಕರಣಗಳೂ ನಡೆದಿವೆ. ಈ ಬಗ್ಗೆ ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರು ದೂರಿದ್ದಾರೆ.