ಮೈಸೂರು, ಸೆ.21- ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಕಳೆಗಟ್ಟಿದೆ. ವಿಶ್ವವಿಖ್ಯಾತ ದಸರಾ ಆಚರಣೆ ಸಂಭ್ರಮಕ್ಕೆ ಮೈಸೂರು ನಗರ ನವ ವಧುವಿನಂತೆ ಶೃಂಗಾರಗೊಂಡಿದೆ. ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರ ಪೂಜೆಯೊಂದಿಗೆ ನಾಳೆ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ.
ಸಾಹಿತಿ ಹಾಗೂ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ಕಾಕ್ ಅವರು ದಸರಾ ಉದ್ಘಾಟನೆ ನೆರವೇರಿಸಲಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಉಪಸ್ಥಿತರಿರುವ ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಶಿವರಾಜ್ ತಂಗಡಗಿ, ಎಚ್.ಕೆ. ಪಾಟೀಲ್, ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಬಿ.ಎಸ್. ಸುರೇಶ್, ಈಶ್ವರ್ ಖಂಡ್ರೆ, ಮಾಜಿ ಸಚಿವ ಜಿ.ಟಿ.ದೇವೇಗೌಡ ಪಾಲ್ಗೊಳ್ಳಲಿದ್ದಾರೆ.ಅದ್ದೂರಿ ದಸರಾ ಆಚರಣೆಗೆ ಸಕಲ ಸಿದ್ದತೆಗಳು ನಡೆದಿವೆ.
ನಾಳೆಯಿಂದ ನವರಾತ್ರಿ ಉತ್ಸವ ಆರಂಭವಾಗಲಿದೆ. ಅರಮನೆಯಲ್ಲಿ ಪಾರಂಪರಿಕ ಆಚರಣೆಗೆ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಮೈಸೂರು ನಗರ ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದೆ. ದಸರಾದ ಆಕರ್ಷಣೆಯ ಕೇಂದ್ರಬಿಂದುವಾದ ಜಂಬೂಸವಾರಿಯ ತಾಲೀಮು ನಡೆಯುತ್ತಿದೆ.
ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಕಾರ್ಯಕ್ರಮ, ವಿಜಯ ದಶಮಿ ಮೆರವಣಿಗೆ ಉತ್ಸವ, ಪಂಜಿನ ಕವಾಯತು ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ.ನಾಳೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂದು ಸಂಜೆ ಮೈಸೂರಿಗೆ ತೆರಳಲಿದ್ದಾರೆ. ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರಿಗೆ ಜಿಲ್ಲಾಡಳಿತ ಈಗಾಗಲೇ ವಿವಿಧ ಹಂತದ ಪಾಸ್ಗಳನ್ನು ವಿತರಿಸುತ್ತದೆ.
ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಹಿಸಿದೆ. ನಾಳೆ ದಸರಾ ಉದ್ಘಾಟನೆ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ನಗರದ ಎಲ್ಐಸಿ ವೃತ್ತ, ರಾಮಸ್ವಾಮಿ ವೃತ್ತ, ಕೆ.ಆರ್.ವೃತ್ತ, ಚಾಮರಾಜನಗರ ಒಡೆಯರ್ ವೃತ್ತ, ದೊಡ್ಡಕೆರೆ ಮೈದಾನ, ಚಾಮರಾಜ ವೃತ್ತ, ಗನ್ಹೌಸ್ ಸೇರಿದಂತೆ ವಿವಿಧೆಡೆ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ.
ಈ ಬಾರಿ 146 ಕಿ.ಮೀ. ಉದ್ದದ ದೀಪಲಂಕಾರ, 116 ವೃತ್ತಗಳಲ್ಲಿ ಕಣ್ಣನ ಸೆಳೆಯುವ ಮೂಮೆಂಟ್ ದೀಪಗಳನ್ನು ಅಳವಡಿಸಲಾಗಿದೆ. ದಸರಾ ಫಲಪುಷ್ಪ ಪ್ರದರ್ಶನ ಕುಪ್ಪಣ್ಣ ಪಾರ್ಕ್ನಲ್ಲಿ ನಡೆಯಲಿದ್ದು, 1 ಲಕ್ಷಕ್ಕೂ ಹೆಚ್ಚು ಹೂವಿನ ಕುಂಡಗಳಲ್ಲಿ ಬಗೆಬಗೆಯ ಹೂ ಗಿಡಗಳನ್ನು ಬೆಳೆಸಲಾಗಿದೆ. 35 ರಿಂದ 40ಕ್ಕೂ ಹೆಚ್ಚು ತಳಿಯ ವಿವಿಧ ಬಣ್ಣಗಳ ಹೂವಿನ ಹಾಗೂ ಅಲಂಕಾರಿಕ ಗಿಡಗಳು ನೋಡುಗರ ಮನಸೂರೆಗೊಳ್ಳಲಿದೆ. ಕುಸ್ತಿಪಂದ್ಯಾವಳಿಯಲ್ಲಿ ಸೆಣೆಸಲು ಪೈಲ್ವಾನರು ತಯಾರಿ ಮಾಡಿಕೊಂಡಿದ್ದಾರೆ. ಯುವ ದಸರಾ ಸಂಭ್ರಮ, ರಸಸಂಜೆ ಕಾರ್ಯಕ್ರಮದ ಸಡಗರಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗಿದೆ.
948.65 ಲಕ್ಷ ರೂ. ವೆಚ್ಚದಲ್ಲಿ ಮೈಸೂರು ದಸರಾ ನಿಮಿತ್ತ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಜಂಬೂ ಸವಾರಿ ಸಾಗುವ ಮಾರ್ಗ ಅರಮನೆ ಸುತ್ತಲೂ ಹಾಗೂ ಇತರ ಕಡೆಗಳಲ್ಲಿ 114.66 ಲಕ್ಷ ರೂ. ವೆಚ್ಚದಲ್ಲಿ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿ, 588.7 ಲಕ್ಷ ರೂ. ವೆಚ್ಚದಲ್ಲಿ ದಸರಾ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಪಾದಚಾರಿ ಮಾರ್ಗದ ದುರಸ್ತಿ, ನಗರದ ಪ್ರಮುಖ ರಸ್ತೆಗಳಲ್ಲಿ ಲೇನ್ಕರ್ಬ್ ಪೈಂಟಿಂಗ್ ಕಾಮಗಾರಿ, ರಸ್ತೆ ದುರಸ್ತಿ ಕಾಮಗಾರಿ, ಒಡೆಯರ್, ಅಂಬೇಡ್ಕರ್ ಪ್ರತಿಮೆಗಳಿಗೆ ಪೈಂಟಿಂಗ್, ಸ್ವಚ್ಚತಾ ಕಾಮಗಾರಿ, ಉದ್ಯಾನವನಗಳಲ್ಲಿ ದೀಪಲಂಕಾರ, ಕಲಾಕೃತಿಗಳ ನಿರ್ಮಾಣ ಸೇರಿದಂತೆ ವಿವಿಧ ಸಿದ್ದತೆಗಳು ನಡೆಯುತ್ತಿವೆ.
ಆನ್ಲೈನ್ನಲ್ಲಿ ಗೋಲ್ಡ್ ಟಿಕೆಟ್ಗಳ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಾರಿ ವೈಮಾನಿಕ ಪ್ರದರ್ಶನ ಆಯೋಜನೆ ಮಾಡಿರುವುದರಿಂದ ದಸರಾಕ್ಕೆ ಮತ್ತಷ್ಟು ರಂಗು ಬಂದಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ತಿಳಿಸಿದ್ದಾರೆ.ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ನವರಾತ್ರಿ ವೇಳೆ ಸ್ವಚ್ಛತಾ ಕಾರ್ಯಕ್ಕೆ ಹೆಚ್ಚುವರಿ ಪೌರ ಕಾರ್ಮಿಕರು ಸ್ವಯಂ ಪ್ರೇರಕರನ್ನು ನಿಯೋಜಿಸಲಾಗಿದೆ ಎಂದು ನಗರ ಪಾಲಿಕೆ ಆಯುಕ್ತರಾದ ಶೇಖ್ ತನ್ನೀರ್ ಆಸಿಫ್ ತಿಳಿಸಿದ್ದಾರೆ.