Thursday, November 21, 2024
Homeರಾಜ್ಯಮತ-ಧರ್ಮಗಳ ತಾರತಮ್ಯವಿಲ್ಲದೆ ದಸರಾ ಸರ್ವಜನಾಂಗದ ಹಬ್ಬವಾಗಬೇಕು : ನಾಡೋಜ ಹಂಪನಾಗ

ಮತ-ಧರ್ಮಗಳ ತಾರತಮ್ಯವಿಲ್ಲದೆ ದಸರಾ ಸರ್ವಜನಾಂಗದ ಹಬ್ಬವಾಗಬೇಕು : ನಾಡೋಜ ಹಂಪನಾಗ

Mysuru Dussehra Mahotsava - 2024 inaugurated by Nadoja Hampa Nagarajaiah at Chamundi Hills

ಮೈಸೂರು,ಅ.3- ದಸರಾ ಹಬ್ಬ ಮತಧರ್ಮಗಳ ತಾರತಮ್ಯವಿರದೆ ಇಡೀ ನಾಡು ಆಚರಿಸುವ ಸರ್ವಜನಾಂಗದ ಹಬ್ಬ ಎಂದು ಹಿರಿಯ ಸಾಹಿತಿ ನಾಡೋಜ ಡಾ. ಹಂಪ ನಾಗರಾಜಯ್ಯ ಪ್ರತಿಪಾದಿಸಿದರು.ಸಾಮಾನ್ಯ ಪ್ರಜೆಯೊಬ್ಬರು ಈ ನಾಡ ಹಬ್ಬದ ಸಡಗರದ ಸರಣಿಯನ್ನು ಉದ್ಘಾಟಿಸುತ್ತಿರುವುದು ಆ ಪರಿಕಲ್ಪನೆಯ ಮುಂದುವರಿಕೆಯಾಗಿದೆ. ಇದು ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು ಎಂಬ ಸಿದ್ಧಾಂತವನ್ನು ಮಾನ್ಯ ಮಾಡಿದಂತೆ ಹಾಗೂ ಜನಮುಖಿ ಕಾಳಜಿಯನ್ನು ಎತ್ತಿ ಹಿಡಿದಂತೆ ಎಂದರು.

ಈ ಪವಿತ್ರ ದಸರಾ ಉತ್ಸವ ಸರಣಿ ಕಾರ್ಯಕ್ರಮದ ಉದ್ಘಾಟನೆಯನ್ನು, ನಮ ನಾಡಿನ ಪ್ರಜೆಗಳ ಪರವಾಗಿ, ವಿನಯ ಮತ್ತು ಧನ್ಯತಾ ಭಾವದಿಂದ ನೆರವೇರಿಸುತ್ತಿದ್ದೇನೆ ಎಂದು ಅವರು ಹೇಳಿದರು.

ಪ್ರಭುತ್ವಗಳಲ್ಲಿ ಪ್ರಜಾಪ್ರಭುತ್ವ ಮುಡಿಯ ಮಾಣಿಕ್ಯ, ಕಳೆದ ತಿಂಗಳು ಸೆ. 15 ರಂದು ತೆಂಕಣದ ಚಾಮರಾಜನಗರದಿಂದ ಬಡಗಣದ ಬೀದರವರೆಗೆ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ ಮತ್ತು ಬಹುತ್ವದ ಮಹತ್ವವನ್ನು ಮನಗಾಣಿಸುವ ವಿಶ್ವದಾಖಲೆಯ ಮಾನವ ಸರಪಳಿಯನ್ನು ಆಯೋಜಿಸಿದ್ದು ಸಮಯೋಚಿತವೂ ಅಭಿನಂದನಾರ್ಹವೂ ಆಗಿದೆ ಎಂದರು.

ಆಸ್ತಿಕತೆ, ನಾಸ್ತಿಕತೆ ಕುರಿತ ಚರ್ಚೆ ಇಲ್ಲಿ ಅಪ್ರಸ್ತುತ, ದೇವಾಲಯಕ್ಕೆ ಬಂದವರೆಲ್ಲಾ ಆಸ್ತಿಕರೆಂದಾಗಲಿ, ಒಳಗೆ ಬರದೆ ದೂರ ಉಳಿದವರೆಲ್ಲ ನಾಸ್ತಿಕರೆಂದಾಗಲಿ ಅಲ್ಲ. ಎಲ್ಲ ದೇಶ ಕಾಲಗಳಲ್ಲೂ ಸಮಾಜ ಮಾನ್ಯಮಾಡಿದ ಶಿಷ್ಟಪರಂಪರೆಯ ಸ್ರೋತವೊಂದು ಜೀವಂತವಾಗಿರುತ್ತದೆ.

ಪ್ರತಿವರ್ಷ ನವರಾತ್ರಿಯಲ್ಲಿ ನನ್ನ ತಾಯಿ ಜಾಕಾಯಿ ಪೆಟಾರಿಯಿಂದ ತನ್ನ ತವರುಮನೆಯ ಬಳುವಳಿಯಾಗಿ ತಂದಿದ್ದ ಎರಡು ಬಚ್ಚಣಿಗೆ ಬೊಂಬೆ ಮತ್ತಿತರ ಪ್ರದರ್ಶನ ವಸ್ತುಗಳನ್ನು ತೆಗೆದು ಕೊಡುತ್ತಿದ್ದರು. ನನ್ನ ತಮ್ಮತಂಗಿಯರೊಂದಿಗೆ ನೂರಾರು ಬೊಂಬೆಗಳನ್ನು ಅಲಂಕರಿಸಿ ಮೆಟ್ಟಿಲು ಮೆಟ್ಟಿಲಾಗಿ ಪೇರಿಸಿದ ಹಲಗೆಗಳ ಮೇಲೆ ಒಪ್ಪವಾಗಿ ಜೋಡಿಸುತ್ತಿದ್ದೆವು.

ಮರದಲ್ಲಿ ಮಾಡಿದ ಆ ಎರಡು ಬಚ್ಚಣಿಗೆ ಬೊಂಬೆಗಳನ್ನು ದೂರ ದೂರ ಇಟ್ಟರೆ ನನ್ನ ತಾಯಿ ಕೂಡಲೆ ಮಕ್ಕಳೇ ಅವು ಎರಡಿದ್ದರೂ ಒಂದೇನೆ. ಅವು ಜೋಡಿ, ಅವು ಶಾಶ್ವತ ದಂಪತಿಗಳು. ಅವನ್ನು ಅಗಲಿಸಬಾರದು. ಈ ಬೊಂಬೆಗಳಂತೆ ಅಗಲದೆ ಗಂಡಹೆಂಡತಿ ಬಾಳಿ ಎಂದು ನನ್ನ ತಾಯಿತಂದೆ ಹರಸಿ ಕೊಟ್ಟಿರುವರು. ಇವು ಬರೀ ಮರದ ಬೊಂಬೆಗಳಲ್ಲ, ಮನೆ ಬೆಳಗುವ ಜೋಡಿ. ನನ್ನಮ ಹೇಳಿದ ಮಾತುಗಳನ್ನು ಈಗಲೂ ಮೆಲಕು ಹಾಕುತ್ತೇನೆ ಎಂದು ಸರಿಸಿದರು.

ಸಹನೆ ಸೌಹಾರ್ದದಿಂದ ಬಾಳಿದರೆ, ನೆಮದಿ ಇದ್ದರೆ ಪ್ರತಿ ಮನೆಯೂ ಅರಮನೆಯೇ, ಎಲ್ಲರೂ ರಾಜರಾಣಿಯರೇ ಎಂದರು.ನವರಾತ್ರಿಯ ತೆಂಕಣಗಾಳಿಗೆ ಮೈಸೂರು ಮೈಕೊಡವಿ, ಪೊರೆಬಿಟ್ಟು, ಶೃಂಗಾರಗೊಂಡು, ಕಂಗೊಳಿಸುತ್ತದೆ. ಮೈಸೂರೆಂದರೆ ದಸರ, ಜಂಬೂಸವಾರಿ ಎಂಬ ಮಾತು ಲೋಕ ಪ್ರಸಿದ್ಧಿ ಪಡೆಯಿತು. ಪ್ರಜಾಪ್ರಭುತ್ವ ಬಂದಮೇಲೆ ಕೆಲವು ಬದಲಾವಣೆ ಆದುವು. ಈ ಬದಲಾವಣೆ ಸ್ವರೂಪದಲ್ಲೇ ಹೊರತು ಸತ್ವದಲ್ಲಿ ಅಲ್ಲ.

ಚುನಾಯಿತ ಸರಕಾರ ಈ ಹಬ್ಬವನ್ನು ಜನಮುಖಿಯಾಗಿಸಿದರು. ಇದು ಅರಮನೆಯ ಹಬ್ಬವಲ್ಲ, ಜನರು ಆರಿಸಿದ ಸರಕಾರ ನಡೆಸುವ ಉತ್ಸವವನ್ನಾಗಿಸಿ ಇನ್ನಷ್ಟು ಅರ್ಥಪೂರ್ಣವಾಗಿ ಹಿಂದಿನಂತೆಯೇ ಸಂಭ್ರಮದಿಂದ ನಡೆಸುತ್ತಿದ್ದಾರೆ. ಸರಕಾರ ಮತ್ತು ಜನರು ಒಟ್ಟಿಗೆ ಹೆಜ್ಜೆ ಹಾಕುವ ಈ ನಾಡ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ ಎಂದು
ಪ್ರಾಯಶಃ ಇನ್ನು ಮುಂದಿನ ತಲೆಮಾರಿಗೆ ಸಿಗದೆ ಮರೆಯಾಗಬಹುದಾದ ಈ ಮಣ್ಣಿನ, ಈ ನೆಲದ ಘಮಲು, ದೇಸೀಯ ಸೊಗಡು ತುಂಬಿರುವ ಹಬ್ಬ ನಿಲ್ಲಬಾರದು. ಈ ಆಚರಣೆಯಿಂದ ಕರ್ನಾಟಕದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಕಿರು ಪರಿಚಯ ಇಂದಿನ ಹೊಸ ತಲೆಮಾರಿನವರಿಗೆ ಆಗುತ್ತದೆ. ದೇಸಿ ವಾದ್ಯ,ಮೇಳಗಳು, ಕಲೆ, ಕುಣಿತ, ಹಾಡು, ಸ್ತಬ್ಧಚಿತ್ರಗಳು, ಬಣ್ಣದ ವೇಷಗಳು, ಕುದುರೆಗಳ ಸಂಚಲನ, ಜಂಬೂ ಸವಾರಿ, ಮುಂತಾದವುಗಳ ಪರಿಚಯ ಶಾಲಾಕಾಲೇಜಲ್ಲಿ ಸಿಗುವುದಿಲ್ಲ. ಹೊಸ ತಲೆಮಾರಿಗೆ ನಮ್ಮ ನಾಡಿನ ಬಹುರೂಪಿ ಸಂಸ್ಕೃತಿಯ ಮತ್ತು ಅಸಿತೆಯ ಆಯಾಮ ಅನುಭವವಾಗುತ್ತದೆ ಎಂದು ತಿಳಿಸಿದರು.

ಅಭೀಷ್ಟವರಪ್ರದಾಯಿನಿ ಎಂದು ಭಕ್ತರು ಆರಾಧಿಸುವ ದೇವಿ ಚಾಮುಂಡಾಂಬಿಕೆಗೆ ಪೊಡಮಟ್ಟು ಐದು ಬೇಡಿಕೆಗಳನ್ನು ಈಡೇರಿಸಿಕೊಡಬೇಕೆಂದು ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.ಇಸ್ರೇಲ್‌‍-ಪ್ಯಾಲಸ್ಟೈನ್‌, ರಷಿಯಾ-ಉಕ್ರೈನ್‌ ಯುದ್ಧ ನಿಂತು, ನಿತ್ಯ ನಡೆಯುತ್ತಿರುವ ಅಮಾಯಕರ ಮಾರಣಹೋಮ ನಿಲ್ಲಲು ಆ ರಾಷ್ಟ್ರನಾಯಕರು ಕೂಡಲೇ ಜೀವಪರ ಕಾಳಜಿ ತೋರುವಂತೆ ಅವರಿಗೆ ಪ್ರೇರಣೆ ನೀಡಬೇಕೆಂದು ಬೇಡುತ್ತೇನೆ.

ಹೆಣ್ಣು ಭ್ರೂಣ ಹತ್ಯೆ ತಡೆಯಲೂ ಚಾಮುಂಡಾದೇವಿಯು ತಾಯಿತಂದೆಯರಿಗೆ ಸದ್ಭುದ್ಧಿ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ. ಬಹು ದೊಡ್ಡ ರಾಷ್ಟ್ರೀಯ ಸಮಸ್ಯೆಯೆಂದರೆ ನಿರುದ್ಯೋಗ ಸಮಸ್ಯೆ, ಯುವಜನರು ಹತಾಶರಾಗಿದ್ದಾರೆ. ನಿರುದ್ಯೋಗ ನಿವಾರಣೆಗೆ ಆದ್ಯತೆಯಿತ್ತು ಕೇಂದ್ರ ಸರಕಾರವು ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸಬೇಕೆಂದು ಯುವಜನತೆಯ ಪರವಾಗಿ ದೇವಿಯನ್ನು ಪ್ರಾರ್ಥಿಸುತ್ತೇನೆ.

ಕನ್ನಡ ನಾಡು ನುಡಿ ನೆಲ ಜಲ ಕಲೆ ಸಂಸ್ಕೃತಿ ಸಂರಕ್ಷಣೆಗಾಗಿ ಹೋರಾಡುವವವರನ್ನು ಕೊಲೆಗಾರರಂತೆ ಕಾಣದೆ, ಪ್ರೀತಿ ಅಭಿಮಾನಗಳಿಂದ ಕಾಣುವಂತೆ ಆಡಳಿತಾಂಗಕ್ಕೆ ಪ್ರೇರಣೆ ಕೊಡುವಂತೆ ವಿನಂತಿಸುತ್ತೇನೆ.

ಸರ್ಕಾರಗಳನ್ನು ಉರುಳಿಸುವ ದುರಾಲೋಚನೆ ಬರದಂತೆ ತಡೆದು, ಚುನಾಯಿತ ಸರ್ಕಾರಗಳನ್ನು ಉಳಿಸುವ ಚಿಂತನೆಗಳನ್ನು ಲೋಕಾಂಬಿಕೆಯು ಮೂಡಿಸಲೆಂದು ಬೇಡುತ್ತೇನೆ ಎಂದು ಹೇಳಿ ಕೊನೆಯಲ್ಲಿ ಒಟ್ಟು 71 ವರ್ಷಗಳ ಸ್ನೇಹದ ಸುಖ ನೀಡಿದ್ದಲ್ಲದೆ ಆರು ವರ್ಷ ಸಹಪಾಠಿಯಾಗಿಯೂ 63 ವರ್ಷ ಮಡದಿಯಾಗಿಯೂ ನನ್ನನ್ನು ರೂಪಿಸಿದ ಮಹಾಶಿಲ್ಪಿ ನಾಡೋಜ ಪ್ರೊ ಕಮಲಾ ಹಂಪನಾ ಅವರ ದಿವ್ಯ ನೆನಪಿಗೆ ನನಗೆ ಸಂದಿರುವ ಈ ಗೌರವವನ್ನು ಸಮರ್ಪಿಸುತ್ತೇನೆ ಎಂದರು.

RELATED ARTICLES

Latest News