Wednesday, March 19, 2025
Homeಬೆಂಗಳೂರು100 ಕೋಟಿ ಮೌಲ್ಯದ ಬಿಡಿಎ ಆಸ್ತಿ ರಕ್ಷಣೆಗೆ ಎನ್‌.ಆರ್‌.ರಮೇಶ್‌ ಮನವಿ

100 ಕೋಟಿ ಮೌಲ್ಯದ ಬಿಡಿಎ ಆಸ್ತಿ ರಕ್ಷಣೆಗೆ ಎನ್‌.ಆರ್‌.ರಮೇಶ್‌ ಮನವಿ

N.R. Ramesh appeals to protect BDA property worth Rs 100 crore

ಬೆಂಗಳೂರು,ಮಾ.19– ನೂರು ಕೋಟಿಗೂ ಹೆಚ್ಚು ಮೌಲ್ಯದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸ್ವತ್ತನ್ನು ಕೆಲ ಭ್ರಷ್ಟ ಅಧಿಕಾರಿಗಳು ಪ್ರಭಾವೀ ಖಾಸಗಿ ಬಿಲ್ಡರ್‌ ಒಬ್ಬನ ಹೆಸರಿಗೆ ನೋಂದಣಿ ಮಾಡಿಕೊಟ್ಟಿರುವ ಬೃಹತ್‌ ಭೂ ಹಗರಣವನ್ನು ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಬೆಳಕಿಗೆ ತಂದಿದ್ದಾರೆ.

ಜಯನಗರ ಬಡಾವಣೆಯ ಒಂದನೇ ಬ್ಲಾಕಿನಲ್ಲಿರುವ ಸಿದ್ಧಾಪುರ ಗ್ರಾಮದ ಸರ್ವೆ ನಂ: 27/3 ರ 30 ಗುಂಟೆ (ಮುಕ್ಕಾಲು ಎಕರೆ) ಸ್ವತ್ತೂ ಸೇರಿದಂತೆ ನೂರಾರು ಎಕರೆ ವಿಸ್ತೀರ್ಣದ ಸ್ವತ್ತುಗಳನ್ನು 1948 ರಲ್ಲಿ ಜಯನಗರ ಬಡಾವಣೆ ನಿರ್ಮಾಣಕ್ಕೆಂದು ಭೂಸ್ವಾಧೀನಪಡಿಸಿಕೊಳ್ಳಲಾಗಿತ್ತು.

ಈ ರೀತಿ ಭೂಸ್ವಾಧೀನಪಡಿಸಿಕೊಂಡಿದ್ದ ನೂರಾರು ಎಕರೆಗಳಷ್ಟು ವಿಸ್ತೀರ್ಣದ ಜಮೀನುಗಳ ಪೈಕಿ, ಸಿದ್ಧಾಪುರ ಗ್ರಾಮದ ಸರ್ವೆ ನಂ: 27/3 ರ 30 ಗುಂಟೆ ವಿಸ್ತೀರ್ಣದ ಸ್ವತ್ತಿನಲ್ಲಿ ಹೂವು – ಹಣ್ಣುಗಳನ್ನು ಬೆಳೆಯುವ ಸಸಿಗಳನ್ನು ಪೋಷಿಸುವ ನರ್ಸರಿ ಇದ್ದ ಕಾರಣ, ಆ ನರ್ಸರಿ ಮಾಲೀಕರಿಂದ ನರ್ಸರಿಯನ್ನು ನಡೆಸಿಕೊಂಡು ಹೋಗಲು ಇನ್ನಷ್ಟು ಕಾಲಾವಕಾಶ ನೀಡಿ ಮತ್ತು ಮುಂದೆ ನರ್ಸರಿಯನ್ನು ಮುಚ್ಚುವ ಸಮಯದಲ್ಲಿ ಬಿಡಿಎ ವಶಕ್ಕೆ ಒಪ್ಪಿಸುತ್ತೇವೆ ಎಂಬರ್ಥದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿತ್ತು.

ಅಲ್ಲದೇ ಸದರೀ ಸಿದ್ಧಾಪುರ ಗ್ರಾಮದ ಸರ್ವೆ ನಂ: 27/3 ರ ಭೂ ಮಾಲೀಕರಿಗೆ ಬಿಡಿಎ ವತಿಯಿಂದ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ನ್ಯಾಯಯುತವಾದ ಪರಿಹಾರ ಧನವೂ ಸಹ ಬಿಡುಗಡೆಯಾಗಿತ್ತು. ಸದರೀ ಸಿದ್ಧಾಪುರ ಗ್ರಾಮದ ಸರ್ವೆ ನಂ: 27/3 ರ 30 ಗುಂಟೆ ಜಾಗದಲ್ಲಿದ್ದ ನರ್ಸರಿಯು ಕಳೆದ ಐದು ವರ್ಷಗಳ ಹಿಂದೆಯೇ ಸ್ಥಗಿತಗೊಂಡಿತ್ತು.

ಈ ರೀತಿ ಸ್ಥಗಿತಗೊಂಡಿದ್ದ ನರ್ಸರಿಯ ಜಾಗವನ್ನು 1948 ರಲ್ಲಿ ಆ ಭೂ ಮಾಲೀಕರಿಂದ ಮುಚ್ಚಳಿಕೆ ಬರೆಯಿಸಿಕೊಂಡಿದ್ದ ಪತ್ರದಲ್ಲಿನ ಷರತ್ತಿನಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕಾನೂನು ರೀತ್ಯಾ ತಮ್ಮ ವಶಕ್ಕೆ ಪಡೆದುಕೊಳ್ಳಬೇಕಿತ್ತು.

ಆದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯವನ್ನು ದುರ್ಬಳಕೆ ಮಾಡಿಕೊಂಡಿರುವ ಅಶೋಕ್‌ ಧಾರಿವಾಲ್‌ ಎಂಬ ಕುಖ್ಯಾತ ಬಿಲ್ಡರ್‌ ಒಬ್ಬ ತನ್ನ ಆರ್ಥಿಕ ಪ್ರಭಾವದಿಂದ 100 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯ ಹೊಂದಿರುವ 32,670 ಚ. ಅಡಿಗಳಷ್ಟು ವಿಸ್ತೀರ್ಣದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಈ ಅಮೂಲ್ಯ ಸ್ವತ್ತನ್ನು 1948 ರಲ್ಲೇ ತಮ್ಮ ಪಾಲಿನ ಪರಿಹಾರಧನವನ್ನು ಪಡೆದಿದ್ದ ಸಿದ್ಧಾಪುರ ಗ್ರಾಮದ ಸರ್ವೆ ನಂ: 27/3 ರ ಭೂ ಮಾಲೀಕರಿಂದ ತಮ್ಮ ಹೆಸರಿಗೆ ನೊಂದಣಿ ಮಾಡಿಸಿಕೊಂಡಿರುವುದಾಗಿ ದಾಖಲೆ ಸಿದ್ದಪಡಿಸಿಕೊಂಡು ಕ್ರಮ ಮಾಡಿಸಿಕೊಂಡಿದ್ದಾರೆ.

100 ಕೋಟಿಗಳಿಗೂ ಹೆಚ್ಚು ಮೌಲ್ಯದ ಅತ್ಯಮೂಲ್ಯ ಸ್ವತ್ತನ್ನು ಅಶೋಕ್‌ ಧಾರೀವಾಲ್‌ ಎಂಬ ಸರ್ಕಾರಿ ನೆಲಗಳ್ಳನೊಬ್ಬ ಕಬಳಿಸಲು ಸಹಕಾರ ನೀಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭ್ರಷ್ಟ ಅಧಿಕಾರಿಗಳ ವಿರುದ್ಧ ಮತ್ತು ಸ್ವತ್ತು ಎಂಬ ಸತ್ಯ ತಿಳಿದಿದ್ದರೂ ಸಹ ಹತ್ತಾರು ಲಕ್ಷ ಲಂಚ ಪಡೆದು, ತಮ್ಮ ಅಧಿಕಾರ ವ್ಯಾಪ್ತಿಗೆ ಒಳಪಡದಿದ್ದರೂ ಸಹ ಕಾನೂನುಬಾಹಿರವಾಗಿ ನೊಂದಣಿ ಮಾಡಿಕೊಟ್ಟಿರುವ ಬೊಮ್ಮನಹಳ್ಳಿ ಉಪ ನೊಂದಣಾಧಿಕಾರಿ ಮತ್ತು ರಾಜರಾಜೇಶ್ವರಿನಗರ ಉಪ ನೊಂದಣಾಧಿಕಾರಿಗಳ ವಿರುದ್ಧ ಹಾಗೂ ಅಶೋಕ್‌ ಧಾರಿವಾಲ್‌ ಎಂಬ ಕುಖ್ಯಾತ ಬಿಲ್ಡರ್‌ ವಿರುದ್ಧ ಕಾನೂನು ರೀತ್ಯಾ ಪ್ರಕರಣಗಳನ್ನು ದಾಖಲಿಸುವ ಸಂಬಂಧ ಸೂಕ್ತ ಕ್ರಮ ವಹಿಸಬೇಕೆಂದು ಮತ್ತು ಕೂಡಲೇ ಈ ಅತ್ಯಮೂಲ್ಯ ಸ್ವತ್ತನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಶಕ್ಕೆ ಪಡೆದುಕೊಳ್ಳುವ ಸಂಬಂಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಂಪೂರ್ಣ ದಾಖಲೆಗಳ ಸಹಿತ ಕಂದಾಯ ಸಚಿವ ಕೃಷ್ಣಭೈರೇಗೌಡ ಹಾಗೂ ಬಿಡಿಎ ಆಯುಕ್ತ ಜೈರಾಮ್‌ ಅವರನ್ನು ರಮೇಶ್‌ ಆಗ್ರಹಿಸಿದ್ದಾರೆ.

RELATED ARTICLES

Latest News