ಬೆಂಗಳೂರು,ಆ.9-ಎಲ್ಲೆಡೆ ನಾಗರಪಂಚಮಿಯ ಸಂಭ್ರಮ. ಹಿಂದೂ ಸಂಪ್ರದಾಯದಲ್ಲಿ ನಾಗರಪಂಚಮಿಗೆ ವಿಶೇಷ ಮಹತ್ವವಿದೆ. ಕಲ್ಲಿನ ನಾಗಪ್ಪನಿಗೆ ಹಾಲೆರೆದು ಪೂಜಿಸುವ ವೈಶಿಷ್ಟ್ಯವಿದೆ. ಇಂದು ಶ್ರದ್ದಾಭಕ್ತಿಯಿಂದ ನಾಗಪ್ಪನಿಗೆ ಹಾಲು ಎರೆಯುವ ಮೂಲಕ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ನಾಗರಪಂಚಮಿಯನ್ನು ಆಚರಿಸಿದರು.
ಕುಕ್ಕೆ ಸುಬ್ರಹಣ್ಯೇಶ್ವರ ದೇವಸ್ಥಾನ, ದೊಡ್ಡಬಳ್ಳಾಪುರದ ಘಾಟಿ ಸುಬ್ರಹಣ್ಯ, ಕೆಂಗೇರಿಯ ಮುಕ್ತಿನಾಗ ದೇವಾಲಯ ಸೇರಿದಂತೆ ವಿವಿಧ ನಾಗದೇವಾಲಯಗಳಲ್ಲಿ ಭಕ್ತಿಭಾವದಿಂದ ನಾಗರಪಂಚಮಿಯನ್ನು ಆಚರಿಸಲಾಯಿತು.
ಕುಕ್ಕೆಸುಬ್ರಹಣ್ಯದಲ್ಲಿ ಶ್ರಾವಣ ಮಾಸದ ನಾಗಪಂಚಮಿಯಂದು ವಿಶೇಷ ಪೂಜೆಗಳು ಜರುಗಿದವು. ನಾಡಿನಾದ್ಯಂತ ಆಗಮಿಸಿದ ಭಕ್ತರು, ನಾಗಪೂಜೆ, ಮಂಡಲ ಪೂಜೆಗಳಲ್ಲಿ ಪಾಲ್ಗೊಂಡಿದ್ದರು. ರಾಜಧಾನಿ ಬೆಂಗಳೂರಿನ ಹಲವು ದೇವಾಲಯಗಳಲ್ಲೂ ಕೂಡ ನಾಗಾರಾಧನೆ ನಡೆಯಿತು. ಕಾಡು ಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿರುವ ನಾಗದೇವನಿಗೆ ನಾಗಪಂಚಮಿ ನಿಮಿತ್ತ ಮಹಿಳೆಯರು ಹಾಲೆರೆದು ಪೂಜೆ ಸಲ್ಲಿಸಿದರು.
ರಾಜ್ಯದ ಬಹುತೇಕ ಕಡೆ ಈ ಹಬ್ಬವನ್ನು ಬಹಳ ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಅದರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ನಾಗರಪಂಚಮಿಗೆ ವಿಶೇಷ ಮಹತ್ವವಿದೆ. ಇಂದು ದೇವಾಲಯಗಳಲ್ಲಿರುವ ನಾಗರಕಲ್ಲು, ಹೊಲಗದ್ದೆಗಳಲ್ಲಿರುವ ಹುತ್ತ ಸೇರಿದಂತೆ ಹಲವೆಡೆ ತೆರಳಿ ಪೂಜೆ ಸಲ್ಲಿಸುವ ಮೂಲಕ ನಾಗರಪಂಚಮಿಯನ್ನು ಅಚರಿಸಲಾಯಿತು.
ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ರಾಯಚೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ನಾಗರಪಂಚಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಪಂಚಮಿಯ 2ನೇ ದಿನವಾದ ಇಂದು ಹೆಣ್ಣುಮಕ್ಕಳು ಶುಚಿರ್ಭೂತರಾಗಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನಾಗಬನಗಳಿಗೆ ತೆರಳಿ ಸರತಿಯಲ್ಲಿ ನಿಂತು ಕಲ್ಲಿನ ನಾಗಪ್ಪನಿಗೆ ಹಾಲೆರೆದು ಸಂಭ್ರಮಿಸಿದರು.
ವಿವಿಧ ತರಹದ ಉಸ್ಲಿ ಉಂಡೆ ಭಕ್ಷ್ಯಗಳನ್ನು ನಾಗಪ್ಪನಿಗೆ ನೈವೇದ್ಯ ಮಾಡಲಾಯಿತು. ಜಿಟಿಜಿಟಿ ಮಳೆಯ ನಡುವೆಯೂ ಮಹಿಳೆಯರು ನಾಗಬನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಉತ್ತರ ಕರ್ನಾಟಕದ ಭಾಗದಲ್ಲಿ ನಾಗರಪಂಚಮಿಯನ್ನು ಮೂರು ದಿನಗಳ ಕಾಲ ಆಚರಿಸುತ್ತಾರೆ.
ಮೊದಲೆರಡು ದಿನ ಮನೆಯಲ್ಲಿ ಪಂಚಮಿ ಆಚರಿಸಿ ಮೂರನೇ ದಿನವಾದ ಇಂದು ನಾಗಬನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಅಲ್ಲದೆ ಜೋಕಾಲಿಗಳನ್ನು ಕಟ್ಟಿ ಆಡುವ ಮೂಲಕ ಸಂಭ್ರಮಿಸುತ್ತಾರೆ.
ಕಲಿಯುಗದಲ್ಲಿ ದೇವರುಗಳು ಪ್ರತ್ಯಕ್ಷವಾಗಿ ಮಾನವನ ಕಣ್ಣಿಗೆ ಕಾಣುವುದಿಲ್ಲ, ವಿಗ್ರಹ ರೂಪದಲ್ಲಿ, ಶಿಲ್ಪ ರೂಪದಲ್ಲಿ, ಚಿತ್ರ ರೂಪಗಳಲ್ಲಿ ಆರಾಧನೆಗೊಳಪಡುತ್ತವೆ. ಆದರೆ ನಾಗದೇವರು ಮಾತ್ರ ಬಿಂಬ, ಪ್ರತಿಬಿಂಬ ರೂಪದಲ್ಲಿ ನಮ ಕಣ್ಣಿಗೆ ಪ್ರತ್ಯಕ್ಷವಾಗಿ ಕಾಣುತ್ತದೆ. ಹಾಗಾಗಿ ಪ್ರತ್ಯಕ್ಷ ದೇವನ ಪೂಜೆಗೆ ಪ್ರಥಮ ಆದ್ಯತೆ ಸಲ್ಲುತ್ತದೆ.