Monday, January 6, 2025
Homeರಾಜಕೀಯ | Politicsದೇವನೂರು ಬಡಾವಣೆಗೆ ಅಥವಾ ಕೆಸರೆ ಗ್ರಾಮಕ್ಕೆ ಸಿದ್ದರಾಮಯ್ಯನವರ ಹೆಸರಿಡಿ : ಹೆಚ್ಡಿಕೆ ಲೇವಡಿ

ದೇವನೂರು ಬಡಾವಣೆಗೆ ಅಥವಾ ಕೆಸರೆ ಗ್ರಾಮಕ್ಕೆ ಸಿದ್ದರಾಮಯ್ಯನವರ ಹೆಸರಿಡಿ : ಹೆಚ್ಡಿಕೆ ಲೇವಡಿ

Name Devanur Layout or Kesare Village after Siddaramaiah

ಮೈಸೂರು,ಜ.4– ಮೈಸೂರಿನ ಕೆಆರ್ಎಸ್ ರಸ್ತೆಗೆ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವನೂರು ಬಡಾವಣೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡಲಿ. ಕೆಸರೆ ಗ್ರಾಮಕ್ಕೆ ಸಿದ್ದರಾಮಯ್ಯ ಹೆಸರಿಡಿ ಎಂದು ಲೇವಡಿ ಮಾಡಿದರು.
ರಸ್ತೆಯಲ್ಲಿ ಯಾಕೆ ಪ್ರತಿಭಟನೆ ಮಾಡುತ್ತೀರ ಎಂದು ಬಿಜೆಪಿ ಅವರಿಗೆ ಕೇಳಿದ್ದೇನೆ. ಪ್ರಿನ್ಸೆಸ್ ರಸ್ತೆ ಬದಲಾವಣೆ ಮುನ್ನೆಲೆಗೆ ಬಂದಾಗಲೂ ಸಿಎಂ ಮೌನವಾಗಿದ್ದಾರೆ.

ಸಿಎಂ ರಸ್ತೆ ವಿಷಯದಲ್ಲಿ ಜಾಣ ಮೌನವಾಗಿದ್ದಾರೆ. ಮುಡಾದ ಕೆಸರೆ ಗ್ರಾಮ ಬಂತಲ್ಲ, ಅದಕ್ಕೆ ಸಿದ್ದರಾಮಯ್ಯ ಹೆಸರನ್ನು ಇಡಿ. ಅದನ್ನು ಬಿಟ್ಟು ರಾಜಮನೆತನದ ಹೆಸರು ಯಾಕೆ ತೆಗೆಯುತೀರಾ ಎಂದು ಹೆಚ್.ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟರು.

ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಹೆಚ್ಚಳ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ.ಕುಮಾರಸ್ವಾಮಿ, ದರ ಹೆಚ್ಚಳ ಜನಕ್ಕೆ ತಾನೇ? ಮಂತ್ರಿಗಳಿಗೆ ಅಲ್ವಲ್ಲಾ. ಅವರಿಗೇನು? ಜನರ ಜೇಬಿಗೆ ಕೈ ಹಾಕಿ ಲೂಟಿ ಮಾಡುತ್ತಿದ್ದಾರೆ. ಜನರಿಗೆ ಕಷ್ಟ ಕೊಟ್ಟು ಖುಷಿ ಪಡುವ ಸರ್ಕಾರ ಇದು. ಗ್ಯಾರಂಟಿಗಳಿಗೆ ಇಬ್ಬರು ಮಹನೀಯರು ಸಹಿ ಹಾಕಿದರು ಎಂದರು.

ಸಿದ್ದರಾಮಯ್ಯ ಸಹಿ ಹಾಕಿದ್ರು. ಇನ್ನೊಬ್ಬ ಮಹಾನ್ ವ್ಯಕ್ತಿ ಬಗ್ಗೆ ನಾನು ಹೇಳಲ್ಲ. ದೇಶದಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಬಳಿಕ ಸಿದ್ದರಾಮಯ್ಯ ದೊಡ್ಡ ಆರ್ಥಿಕ ತಜ್ಞರು. ಅವರೇ ಅಲ್ಲವೇ ಸಹಿ ಹಾಕಿರೋದು. ಮಂತ್ರಿಗಳ ಅಭಿವೃದ್ಧಿ ಆಗುತ್ತಿದೆ. ಜನರ ಅಭಿವೃದ್ಧಿ ಯಾರಿಗೆ ಬೇಕು. ಎಲ್ಲದಕ್ಕೂ ಕೂಡ ಪರ್ಸೆಂಟೇಜ್ ಕೇಳುತ್ತಾರೆ. ಆಶ್ರಯ ಮನೆಗಳಿಗೂ ವಸೂಲಿ ಶುರು ಆಗಿದೆಯಂತೆ ಎಂದು ಅವರು ಆರೋಪಿಸಿದರು.

ಆಪರೇಷನ್ ಹಸ್ತದ ವಿಚಾರ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅದು ನಡೀತಾನೇ ಇದೆ. ನಮಲ್ಲಿ 18 ಜನ ಶಾಸಕರಿದ್ದಾರೆ. ಒಟ್ಟಿಗಿದ್ದಾರೆ. ಅದನ್ನೇ ಶಾಸಕ ಹರೀಶ್ಗೌಡ ಹೇಳಿರೋದು. ಒತ್ತಡ ಅಂತೂ ಇರತ್ತದೆ. ಅದನ್ನೇ ಬೆಳಗಾವಿಯಲ್ಲಿ ಶಾಸಕರು ಕೂತು ಮಾತನಾಡಿದ್ದಾರೆ ಅಷ್ಟೇ. ನಮ ಶಾಸಕರು ನಮ ಜೊತೆ ಇರುತ್ತಾರೆ ಎಂದರು.

2006-2007 ರಲ್ಲಿ ನಾನು ಮೈಸೂರಿಗೆ ಸಾಕಷ್ಟು ಅನುದಾನ ಕೊಟ್ಟಿದ್ದೇನೆ. ನಾನು ಬಂಬು ಬಜಾರ್ನಲ್ಲಿ ಎಷ್ಟು ಮನೆ ಕಟ್ಟಿದ್ದೇನೆ. ರಾಜ ಕಾಲುವೆ ಕೆಲಸ ಮಾಡಿದ್ದೇನೆ. ಅದೆಲ್ಲ ನಾನು ಮಾಡಿದ್ದೇನೆಂದು ನನ್ನ ಹೆಸರಿಡಿ ಎಂಬುದಾಗಿ ಹೇಳಿದ್ದೀನೆಯೇ? ನಾನು ಜನರ ಹೃದಯದಲ್ಲಿರಬೇಕು ಅಷ್ಟೇ ಎಂದು ಅವರು ಹೇಳಿದರು.

ಶಾಸಕ ಜಿ.ಟಿ.ದೇವೇಗೌಡರ ನಡುವಿನ ಮುನಿಸು ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್ಡಿಕೆ, ಮನೆ ಎಂದ ಮೇಲೆ ಮುನಿಸು ಇರೋದಿಲ್ಲವೇ? ಗಂಡ- ಹೆಂಡತಿ ಜಗಳ ಉಂಡು ಮಲಗುವ ತನಕ. ನಮಲ್ಲಿ ಇರುವ ಭಿನ್ನಾಭಿಪ್ರಾಯ ದೂರ ಆಗುತ್ತವೆ. ಎಲ್ಲವೂ ಕೂಡ ಸರಿ ಹೋಗುತ್ತದೆ. ಸಂಜೆಯ ಜೆಡಿಎಸ್ ಸಭೆಗೆ ಜಿಟಿದೇವೇಗೌಡರು ಬರುತ್ತಾರೆ ಎಂದರು.

RELATED ARTICLES

Latest News