ಯಶವಂತಪುರ, ಜ.31- ಹೊಸಹಳ್ಳಿಯಿಂದ ಕಡಬಗೆರೆವರೆಗಿನ 3ನೇ ಹಂತದ ಮೆಟ್ರೋ ಮಾರ್ಗವನ್ನು ತಾವರೆಕೆರೆ ಗ್ರಾಮದವರೆಗೂ ವಿಸ್ತರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಹೇರೋಹಳ್ಳಿ ವಾರ್ಡ್ ಭಾರತ್ ನಗರದ ತಮ ಕಚೇರಿ ಕೆಂಪೇಗೌಡ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯ ಮೈಸೂರು ರಸ್ತೆ ಹಾಗೂ ಮಾಗಡಿ ಮುಖ್ಯರಸ್ತೆ ನಡುವೆ ಬಿಡಿಎ ಕೆಂಪೇಗೌಡ ಬಡಾವಣೆಯನ್ನು ಅಭಿವೃದ್ಧಿಪಡಿಸುತ್ತಿದೆ.
ಮೈಸೂರು ರಸ್ತೆಯಲ್ಲಿ ಮೆಟ್ರೋ ರೈಲು ಚಳ್ಳೆಘಟ್ಟದವರೆಗೆ ಸಂಚರಿಸುತ್ತಿದೆ. ಅಂತೆಯೇ ಮಾಗಡಿ ಮುಖ್ಯರಸ್ತೆಯಲ್ಲಿ ನಮ ಮೆಟ್ರೊ ಮೂರನೇ ಹಂತದ (ಕಿತ್ತಳೆ ಮಾರ್ಗ) ವಿಸ್ತೃತ ಯೋಜನಾ ವರದಿ,ಭೂಸ್ವಾನ, ಮಣ್ಣು ಪರೀಕ್ಷೆ ಸೇರಿ ಮೆಟ್ರೋಗೆ ಸಂಬಂಧಿಸಿದ ಪ್ರಕ್ರಿಯೆಗಳು ಪ್ರಗತಿಯಲ್ಲಿದ್ದು 2029ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.
ಜತೆಗೆ ಹೊಸ ಮೆಟ್ರೊ ಮಾರ್ಗಗಳಲ್ಲಿ ಡಬಲ್ ಡೆಕರ್ ನಿರ್ಮಿಸಿ ವಾಹನ ದಟ್ಟಣೆ ತಪ್ಪಿಸಬೇಕೆಂಬ ಡಿಸಿಎಂ ಸೂಚನೆಯಿಂದ ಮೆಟ್ರೊ ಮೂರನೇ ಹಂತಕ್ಕೂ ಡಬಲ್ ಡೆಕರ್ ಸೇರ್ಪಡೆಯಾಗಲಿದೆ. ಇದರಿಂದ ಮಾಗಡಿ ಮುಖ್ಯ ರಸ್ತೆಯಲ್ಲಿ ಮೆಟ್ರೋ ಮಾರ್ಗದ ಕೆಳಗೆ ಎತ್ತರಿಸಿದ ಮಾರ್ಗ ನಿರ್ಮಾಣವಾಗಲಿದ್ದು, ಸಂಚಾರ ದಟ್ಟಣೆ ನಿವಾರಣೆಯಾಗಲಿದೆ.
ಅಲ್ಲದೆ ಈ ಭಾಗದ ಕ್ಷಿಪ್ರ ಬೆಳವಣಿಗೆ, ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಜನತೆಯ ಪರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.