ಚಿಕ್ಕಬಳ್ಳಾಪುರ,ಆ.18- ವೀಕೆಂಡ್ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣ ನಂದಿಗಿರಿ ಧಾಮಕ್ಕೆ ಪ್ರವಾಸಿಗರ ದಂಡೇ ಹರಿದುಬಂದಿತ್ತು.ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯ ನಡುವೆಯೂ ನಂದಿ ಬೆಟ್ಟದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಲು ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು.
ಇದರಿಂದ ನಂದಿಬೆಟ್ಟದಲ್ಲಿ ಕಣ್ಣಾಯಿಸಿದ ಕಡೆಯಲ್ಲೆಲ್ಲಾ ಜನಸಾಗರವೇ ಕಾಣುತ್ತಿತ್ತು. ನಿನ್ನೆ ಸುಮಾರು 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಿದ್ದರು ಎನ್ನಲಾಗಿದೆ.ವಾಹನದಟ್ಟಣೆಯಿಂದ ಗಿರಿಧಾಮ ರಸ್ತೆಯಲ್ಲಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿ ಪ್ರವಾಸಿಗರು ಪರದಾಡುವಂತಾಗಿತ್ತು. ಪ್ರವೇಶ ಟಿಕೆಟ್ ವಿತರಿಸಲು ಸಿಬ್ಬಂದಿಗಳು ಹರಸಾಹಸ ಪಡುವಂತಾಗಿತ್ತು.
ಸುರಿಯುವ ಮಳೆಯನ್ನೂ ಲೆಕ್ಕಿಸದೆ ಪ್ರವಾಸಿಗರು ತಾ ಮುಂದು, ನಾ ಮುಂದು ಎನ್ನುವಂತೆ ಬೆಟ್ಟವನ್ನು ಏರುತ್ತಿದ್ದ ದೃಶ್ಯಗಳು ಕಂಡುಬಂದವು.ಛುಮುಛುಮು ಚಳಿಗೆ ನಂದಿಗಿರಿಧಾಮದ ಸುತ್ತಮುತ್ತ ಇರುವ ಹೋಟೆಲ್‌ಗಳು, ಕಾಫಿ, ಟೀ ಅಂಗಡಿಗಳಲ್ಲಿ ಜನರು ತುಂಬಿ ತುಳುಕುತ್ತಿದ್ದರು.