ಬೆಂಗಳೂರು, ಮಾ.29– ಹಸು ಮೈ ತೊಳೆಯಲು ಕೆರೆಗೆ ಹೋಗಿದ್ದ ಯುವಕ ಮುಳುಗುತ್ತಿದ್ದುದನ್ನು ಗಮನಿಸಿ ರಕ್ಷಿಸಲು ಮುಂದಾದ ಇಬ್ಬರು ಸೇರಿದಂತೆ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಂದು ಬೆಳಿಗ್ಗೆ ನಂಜನಗೂಡು ತಾಲೂಕಿನ ಬಿಳಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಾಮಳ್ಳಿ ನಿವಾಸಿಗಳಾದ ವಿನೋದ, ಬಸವೇಗೌಡ ಮತ್ತು ಮುದ್ದೇಗೌಡ ಮೃತಪಟ್ಟವರು.
ಇಂದು ಬೆಳಿಗ್ಗೆ 8.30 ರ ಸುಮಾರಿನಲ್ಲಿ ವಿನೋದ ಎಂಬಾತ ಹಸು ಮೈ ತೊಳೆಯಲು ಕೆರೆಗೆ ಹೋಗಿದ್ದಾಗ ಹಸು ನೀರಿಗೆ ಇಳಿಯುತ್ತಿದ್ದಂತೆ ಸ್ವಲ್ಪ ಮುಂದೆ ಹೋಗಿದೆ. ಹಸು ಹಿಡಿದುಕೊಳ್ಳಲು ವಿನೋದ ಹೋದಾಗ ನೀರಿನಲ್ಲಿ ಮುಳುಗಿದ್ದಾರೆ.
ಇದನ್ನು ಗಮನಿಸಿದ ಬಸವೇಗೌಡ ಹಾಗೂ ಮುದ್ದೇಗೌಡ ನೀರಿಗೆ ಇಳಿದು ವಿನೋದನನ್ನು ರಕ್ಷಿಸಲು ಯತ್ನಿಸಿದರಾದರೂ ಸಾದ್ಯವಾಗದೆ ಅವರು ಸಹ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಗಮನಿಸಿದ ಮತ್ತೊಬ್ಬರು ತಕ್ಷಣ ಊರಿನೊಳಗೆ ಹೋಗಿ ವಿಷಯ ತಿಳಿಸಿದ್ದಾರೆ.
ಗ್ರಾಮಸ್ಥರು ಓಡಿ ಬಂದು ಕೆರೆಗೆ ಹಾರಿ ಮೂವರನ್ನು ರಕ್ಷಿಸಲು ಮುಂದಾದರಾದರೂ ಸಾಧ್ಯವಾಗಿಲ್ಲ. ವಿನೋದನ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಸುದ್ದಿ ತಿಳಿದು ಬಿಳಿಗೆರೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.