ಬೆಂಗಳೂರು: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಮ್ಮ ಮೆಟ್ರೋ ರೈಲಿಗೆ ನಾಮಕರಣ ಮಾಡುವಂತೆ ಪಟ್ಟನಾಯಕನಹಳ್ಳಿ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಂಜಾವಧೂತ ಸ್ವಾಮೀಜಿ ಅವರು ಆಗ್ರಹಿಸಿದರು.
ರಾಜ್ಯ ಒಕ್ಕಲಿಗರ ಸಂಘವು ಕೃಷ್ಣಪ್ಪ ರಂಗಮ್ಮ ಎಜ್ಯುಕೇಷನ್ ಟ್ರಸ್ಟ್ ಸಹಯೋಗದೊಂದಿಗೆ ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಎಸ್.ಎಸ್. ಎಲ್.ಸಿ.ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. 95ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು. ಕೆಂಪೇಗೌಡರು ಬೆಂಗಳೂರನ್ನು ಕಟ್ಟಿ ಬೆಳೆಸಿದ್ದಾರೆ. ಅವರ ಹೆಸರನ್ನು ನಮ್ಮ ಮೆಟ್ರೋ ರೈಲಿಗೆ ನಾಮಕರಣ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದರು.
ಭಕ್ತಿ ಭಂಡಾರಿ ಬಸವಣ್ಣ ಅವರ ಹೆಸರನ್ನು ದೊಡ್ಡ ಯೋಜನೆಗೆ ನೀಡಲಿ. ಕೆಂಪೇಗೌಡರ ಹೆಸರನ್ನು ಬೆಂಗಳೂರು ಹೊರತುಪಡಿಸಿ ಬೇರೆ ಯಾವ ನಗರದಲ್ಲೂ ನಾಮಕರಣ ಮಾಡಿ ಎಂದು ನಾವು ಕೇಳುತ್ತಿಲ್ಲ ಎಂದರು. ರಾಜ್ಯ ಒಕ್ಕಲಿಗರ ಸಂಘವು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಹೆಸರಿನಲ್ಲಿ ಮತ್ತೊಂದು ಮೆಡಿಕಲ್ ಕಾಲೇಜಿನ ಸ್ಥಾಪಿಸಬೇಕು. ಹಾಗೆಯೇ ಎಂಜಿನಿಯರಿಂಗ್ ಕಾಲೇಜನ್ನೂ ಸ್ಥಾಪನೆ ಮಾಡಬೇಕು. ಸಾಧ್ಯವಾದರೆ ಒಕ್ಕಲಿಗ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎರಡೂ ಕಾಲೇಜಿನಲ್ಲಿ ತಲಾ 10 ಸೀಟುಗಳನ್ನು ಉಚಿತವಾಗಿ ನೀಡಲು ಮುಂದಾಗಬೇಕು ಎಂದು ಅವರು ಸಲಹೆ ಮಾಡಿದರು.
ದೇವೇಗೌಡರು ಮಾದರಿ ಆಡಳಿತವನ್ನು ನೀಡಿದ್ದಾರೆ. ಅವರ ಹೆಸರಿನಲ್ಲಿ ಕಾಲೇಜು ಸ್ಥಾಪಿಸಿದರೆ ಎಲ್ಲರೂ ಒಪ್ಪುತ್ತಾರೆ ಎಂದು ಅಭಿಪ್ರಾಯಪಟ್ಟರು.
ಪ್ರತಿಭಾವಂತ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ವಿಶೇಷ ಸನ್ಮಾನ ಮಾಡುವಂತಹ ಸಾಧನೆ ಮಾಡಬಹುದು ತಂದೆ ತಾಯಿಗಳ ಕಷ್ಟ-ಕಾರ್ಪಣ್ಯ ಪ್ರೀತಿ ತ್ಯಾಗವನ್ನು ಮಕ್ಕಳು ಮರೆಯಬಾರದು. ಸಮಾಜದಲ್ಲಿ ತಮ್ಮ ತಂದೆ ತಾಯಿ ತಲೆಯೆತ್ತಿ ನಡೆಯುವಂತೆ ಕೀರ್ತಿವಂತರಾಗಿ ಸಮಾಜಕ್ಕೆ ಆಸ್ತಿಯಾಗಿ ದೊಡ್ಡ ದೊಡ್ಡ ಕೊಡುಗೆಯನ್ನು ನೀಡಬೇಕು. ಪೋಷಕರು ಮಕ್ಕಳ ಮೇಲೆ ಒತ್ತಡ ಹೇರದೆ, ಸಮಾಜದ ಆಸ್ತಿಯನ್ನಾಗಿ ರೂಪಿಸಬೇಕೆಂದು ಕಿವಿಮಾತು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಅವರು ಮಾತನಾಡಿ ಒಕ್ಕಲಿಗ ಜನಾಂಗದ ಮಕ್ಕಳಿಗೆ ಶಿಕ್ಷಣ ಕೊಡುವುದು ಬಹಳ ಮುಖ್ಯ. ಪ್ರತಿಭಾವಂತ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಲು ಗಮನಹರಿಸುವುದರ ಜೊತೆಗೆ ಹೊಸ ಹೊಸ ಆವಿಷ್ಕಾರಗಳು, ಸಂಶೋಧನೆ, ಸಾಧನೆ ಮಾಡಲು ಮುಂದಾಗಬೇಕು. ಒಕ್ಕಲಿಗರ ಸಂಘವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಒಟ್ಟು 2592ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದೆ. ಸದ್ಯದಲ್ಲೇ ಸರ್ವ ಸದಸ್ಯರ ಸಭೆ ನಡೆಸಲಾಗುವುದು ಎಂದರು.
ಚಲನಚಿತ್ರ ನಟ ಶ್ರೀನಗರ ಕಿಟ್ಟಿ, ರೋಲ್ಸ್ ರಾಯ್ಸ್ ನ ರೋಬೋಟೆಕ್ಸ್ ಇಂಜಿನಿಯರ್ ರಿತುಪರ್ಣ ಕೆ. ಎಸ್., ಸೇವಾ ನಿರತ ಯೋಧ ಬಿ.ಎಸ್. ಭೀಮೇಗೌಡ, ರೈತರತ್ನ ಪ್ರಶಸ್ತಿ ಪುರಸ್ಕೃತ ಸಿ. ಪುಟ್ಟಸ್ವಾಮಿ, ನಿವೃತ್ತ ಪ್ರಾಧ್ಯಾಪಕ ಮಾಗಡಿ ಆರ್. ಗುರುದೇವ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಹಿತಿ ಜಯಪ್ರಕಾಶ್ ಗೌಡರು, ಒಕ್ಕಲಿಗರ ಸಂಘದ ಗೌರವ ಅಧ್ಯಕ್ಷ ಡಿ. ಹನುಮಂತಯ್ಯ ಪ್ರಧಾನ ಕಾರ್ಯದರ್ಶಿ ಟಿ. ಕೋನಪ್ಪರೆಡ್ಡಿ ಸಹಾಯಕ ಕಾರ್ಯದರ್ಶಿ ಆರ್. ಹನುಮಂತರಾಯಪ್ಪ, ಖಜಾಂಚಿ ಎನ್.ಬಾಲಕೃಷ್ಣ, ನಿರ್ದೇಶಕರಾದ ಸಿ.ಎಂ.ಮಾರೇಗೌಡ, ಅಶೋಕ ಎಚ್.ಎನ್., ಎಂ. ಪುಟ್ಟಸ್ವಾಮಿ, ಡಾ. ಟಿ.ಎಚ್. ಆಂಜಿನಪ್ಪ, ಕೃಷ್ಣಪ್ಪ ರಂಗಮ್ಮ ಕೃಷ್ಣ ಟ್ರಸ್ಟ್ ನಿರ್ದೇಶಕರಾದ ಅಶ್ವಿನಿ ನಾಗೇಂದ್ರ ಮೊದಲಾದ ಗಣ್ಯರು ಭಾಗವಹಿಸಿದ್ದರು.