ಬೆಳಗಾವಿ,ಡಿ.18- ಪ್ರಸಕ್ತ ವರ್ಷ ರಾಜ್ಯದಲ್ಲಿ 100 ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಗೆ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ದೊಡ್ಡನಗೌಡ ಹನುಮಗೌಡ ಪಾಟೀಲ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2-3 ವರ್ಷದಲ್ಲಿ 400 ವಿದ್ಯುತ್ ಉಪಠಾಣೆಗಳನ್ನು ಮಾಡುವ ಗುರಿಯಿದ್ದು,ಜಮೀನು ಇರುವ ಕಡೆಗಳಲ್ಲಿ ಉಪಠಾಣೆಗಳನ್ನು ಮಂಜೂರು ಮಾಡಲಾಗುತ್ತಿದೆ ಎಂದರು.
ಪವನಶಕ್ತಿ ವಿದ್ಯುತ್ ಯಂತ್ರಗಳನ್ನು ಅಳವಡಿಸಲು ಭಾರೀ ಗಾತ್ರದ ಯಂತ್ರೋಪಕರಣಗಳನ್ನು ಪಂಚಾಯಿತಿ ರಸ್ತೆಗಳಲ್ಲಿ ಸಾಗಿಸಿದಾಗ ರಸ್ತೆಗಳು ಹಾಳಾಗುತ್ತವೆ. ಅಂತಹ ರಸ್ತೆಗಳನ್ನು ಪವನಶಕ್ತಿ ಯಂತ್ರಗಳನ್ನು ಅಳವಡಿಸುವವರೇ ಸರಿಪಡಿಸಬೇಕು. ಈ ಸಂಬಂಧ ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು. ಕ್ರೆಡಿಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗುವುದು ಎಂದು ಅವರು ಹೇಳಿದರು.
ರಾಜ್ಯದಲ್ಲಿ ನಿತ್ಯ ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆ ಥ್ರೀಫೇಸ್ ವಿದ್ಯುತ್ ಒದಗಿಸಲಾಗುತ್ತಿದೆ. ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಗೆ ದಿನದ 24 ಗಂಟೆಯೂ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದ ಅವರು, ಬಿಸಿಲು ಇದ್ದಾಗ ಮಾತ್ರ ಸೌರ ವಿದ್ಯುತ್ ಉತ್ಪಾದನೆಯಾಗುತ್ತದೆ. ಆದರೆ ಪವನಶಕ್ತಿ ಗಾಳಿ ಬೀಸುತ್ತಿದ್ದರೆ ಹಗಲು-ರಾತ್ರಿ ಉತ್ಪಾದನೆಯಾಗುತ್ತದೆ. ರಾಜ್ಯದಲ್ಲಿ 7,300 ಮೆಗಾವ್ಯಾಟ್‌ನಷ್ಟು ಪವನಶಕ್ತಿ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಅವರು ತಿಳಿಸಿದರು.
ಕುಷ್ಟಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 213 ವಿಂಡ್ ಟರ್ಬೈನ್‌ಗಳಿಂದ 433.12 ಮೆಗಾವ್ಯಾಟ್ ಸಾಮರ್ಥ್ಯದ ಪವನವಿದ್ಯುತ್ ಯೋಜನೆಗಳು ಅನುಷ್ಠಾನಗೊಂಡಿವೆ. ನವೆಂಬರ್ ಅಂತ್ಯದ ವೇಳೆಗೆ 1,394 ಮೆಗಾವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಗಳು ಹಂಚಿಕೆಯಾಗಿದ್ದು, 57 ಅನುಷ್ಠಾನಗೊಂಡಿವೆ. 1,337 ಮೆಗಾ ವ್ಯಾಟ್ ಸಾಮರ್ಥ್ಯದ ಯೋಜನೆಗಳು ವಿವಿಧ ಹಂತದ ಪ್ರಗತಿಯಲ್ಲಿವೆ ಎಂದು ಹೇಳಿದರು.
ಪವನ ವಿದ್ಯುತ್ ಯೋಜನೆಗಳಿಗೆ ಬೇಕಾಗಿರುವ ಜಮೀನುಗಳನ್ನು ಪಡೆಯುವ ಸಂಪೂರ್ಣ ಜವಾಬ್ದಾರಿ ಆಯಾ ಕಂಪನಿಯವರದಾಗಿರುತ್ತದೆ. ರೈತರು ಮತ್ತು ಗುತ್ತಿಗೆದಾರರ ನಡುವಿನ ಒಪ್ಪಂದದ ಆಧಾರದ ಮೇಲೆ ಪವನಶಕ್ತಿ ಯಂತ್ರಗಳನ್ನು ಅಳವಡಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಹಾಸನ ಜಿಲ್ಲಾ ಅರಕಲಗೂಡು ವಿಧಾನಸಭಾ ಕ್ಷೇತ್ರದ ಆಲ್ಲಪಟ್ಟಣ ಗ್ರಾಮದಲ್ಲಿ 220 ಕೆವಿ ವಿದ್ಯುತ್ ಉಪಕೇಂದ್ರವನ್ನು ಆದಷ್ಟು ಶೀಘ್ರ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ಶಾಸಕ ಎ.ಮಂಜು ಅವರ ಪ್ರಶ್ನೆಗೆ ಉತ್ತರಿಸಿದರು.
ಈ ಉಪಕೇಂದ್ರ ನಿರ್ಮಿಸಲು 10 ಎಕರೆ ಜಮೀನು ಅಗತ್ಯವಿದೆ. 2 ಎಕರೆ 30 ಗುಂಟೆ ಜಮೀನಿನ ಮಂಜೂರಾತಿ ಪ್ರಸ್ತಾವನೆಯನ್ನು ಹಾಸನ ಜಿಲ್ಲಾಧಿಕಾರಿ ಕಂದಾಯ ಇಲಾಖೆಗೆ ಸಲ್ಲಿಸಿದ್ದಾರೆ. ಜಮೀನು ಇಂಧನ ಇಲಾಖೆಗೆ ಹಸ್ತಾಂತರಗೊಂಡ ನಂತರ ಅಂದಾಜುಪಟ್ಟಿ ತಯಾರಿಸಿ ಟೆಂಡರ್ ಕರೆದು ವಿದ್ಯುತ್ ಉಪಕೇಂದ್ರ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
