ನವದೆಹಲಿ,ಡಿ.9- ಇಂಡಿಗೋ ವಿಮಾನಯಾನಗಳ ರದ್ದತಿಯಿಂದಾಗಿ ಪ್ರಯಾಣಿಕರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು ದೇಶದಾದ್ಯಂತ ದಿನದ 24 ಗಂಟೆಗಳೂ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಪರಿಶೀಲಿಸುವ ಕ್ರಮ ಕೈಗೊಂಡಿದೆ.
ಹಿರಿಯ ಅಧಿಕಾರಿಗಳನ್ನು ಪ್ರಮುಖ ವಿಮಾನ ನಿಲ್ದಾಣಗಳಿಗೆ ನಿಯೋಜಿಸಲಾಗಿದ್ದು, ಅಲ್ಲಿ ಸಿಲುಕಿಕೊಂಡಿರುವ ಇಲ್ಲವೇ ವಿಮಾನಯಾನ ವಿಳಂಬದಿಂದ ಸಮಸ್ಯೆಗೊಳಗಾಗಿರುವ ಪ್ರಯಾಣಿಕರಿಗೆ ಪರಿಹಾರ, ಪರ್ಯಾಯ ವ್ಯವಸ್ಥೆ ಲಭ್ಯವಾಗಿದೆಯೇ ಎಂದು ಈ ಅಧಿಕಾರಿಗಳು ಖಚಿತ ಪಡಿಸಿಕೊಳ್ಳಲಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರು ತಿಳಿಸಿದ್ದಾರೆ.
ಎಕ್‌್ಸ ಜಾಲತಾಣದಲ್ಲಿ ವಿವರವಾದ ಪೋಸ್ಟ್ ಮಾಡಿರುವ ನಾಯ್ಡು ಅವರು ತಮ ಸಚಿವಾಲಯ ಹಾಗೂ ನಾಗರಿಕ ವಿಮಾನ ಯಾನ ಮಹಾನಿರ್ದೇಶನಾಲಯ ಜೊತೆಗೂಡಿ ಇಂಡಿಗೋ ಕಾರ್ಯಾಚರಣೆಗಳ ಅನಿಯಮಿತತೆ ದೇಶದಾದ್ಯಂತ ವಿಮಾನ ಸಂಚಾರವನ್ನು ಬಾಧಿಸಲಾರಂಭಿಸಿದ ಡಿ.3 ರಿಂದ ನಿರಂತರವಾಗಿ ಎಲ್ಲಾ ವಿಮಾನನಿಲ್ದಾಣಗಳ ಸ್ಥಿತಿಯ ಪರಾಮರ್ಶೆ ನಡೆಸುತ್ತಿವೆ ಎಂದು ಹೇಳಿದ್ದಾರೆ.
ಈ ಬೆಳವಣಿಗೆಯನ್ನು ಅಸಾಧಾರಣ ಸನ್ನಿವೇಶಗಳು ಎಂದು ಬಣ್ಣಿಸಿರುವ ನಾಯ್ಡು ಅವರು ವಿಮಾನಯಾನ ವ್ಯವಸ್ಥೆಯ ಅತ್ಯುನ್ನತ ಮಟ್ಟದ ತತ್‌ಕ್ಷಣದ ಮತ್ತು ತಾಳಿಕೆ ಯೋಗ್ಯ ಮಧ್ಯಪ್ರವೇಶ ಅಗತ್ಯವಾಗಿರುತ್ತದೆ ಎಂದಿದ್ದಾರೆ.
ಸಚಿವಾಲಯ ಮತ್ತು ಮಹಾ ನಿರ್ದೇಶನಾಲಯದ ಎಲ್ಲಾ ಹಿರಿಯ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಪರಾಮರ್ಶನಾ ಸಭೆ ನಡೆದಿದೆ. ಈ ಪರಾಮರ್ಶೆಯ ಉದ್ದೇಶ ವಿಮಾನನಿಲ್ದಾಣಗಳ ಕಾರ್ಯಾಚರಣೆ, ವಿಮಾನಯಾನ ಸಂಸ್ಥೆಯ ಉತ್ತರದಾಯಿತ್ವ ಮತ್ತು ಹೊಣೆಗಾರಿಕೆ ಮತ್ತು ವಿಳಂಬ ಹಾಗೂ ರದ್ದತಿಯಿಂದ ಬಾಧಿತರಾದ ಪ್ರಯಾಣಿಕರಿಗೆ ಒದಗಿಸಲಾಗುತ್ತಿರುವ ಸೇವೆಗಳ ಗುಣಮಟ್ಟವನ್ನು ಸಮಗ್ರವಾಗಿ ಪರಿಶೀಲಿಸುವುದಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
