ನವದೆಹಲಿ,ಡಿ.21- ಸುಪ್ರೀಂಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ ಒಂದು ವರ್ಷದ ನಂತರ ಅಚ್ಚರಿಯ ಬೆಳವಣಿಗೆ ಹೊರಬಿದ್ದಿದ್ದು, ಚುನಾವಣಾ ಬಾಂಡ್ ಯೋಜನೆ ರದ್ದುಗೊಂಡ ಮೊದಲ ಹಣಕಾಸು ವರ್ಷದಲ್ಲಿ ರಾಜಕೀಯ ಪಕ್ಷಗಳು ಗಮನಾರ್ಹ ಪ್ರಮಾಣದ ನಿಧಿಯನ್ನು ಪಡೆದಿವೆ.
ರಾಜಕೀಯ ದೇಣಿಗೆಗಳಲ್ಲಿ ಮೂರು ಪಟ್ಟು ಹೆಚ್ಚಳ ದಾಖಲಾಗಿದೆ. 2024-25ರ ಹಣಕಾಸು ವರ್ಷದಲ್ಲಿ, ಒಂಬತ್ತು ಚುನಾವಣಾ ಟ್ರಸ್ಟ್‌ಗಳು ವಿವಿಧ ರಾಜಕೀಯ ಪಕ್ಷಗಳಿಗೆ ಒಟ್ಟು 3,811 ಕೋಟಿ ದೇಣಿಗೆ ನೀಡಿವೆ. ಬಿಜೆಪಿ ಅತಿದೊಡ್ಡ ಫಲಾನುಭವಿಯಾಗಿತ್ತು. ಕಾಂಗ್ರೆಸ್ ಕೂಡ ಕೋಟ್ಯಂತರ ಮೌಲ್ಯದ ದೇಣಿಗೆಗಳನ್ನು ಪಡೆದುಕೊಂಡಿದೆ.
2024-25ರ ಹಣಕಾಸು ವರ್ಷದಲ್ಲಿ, ಒಂಬತ್ತು ಚುನಾವಣಾ ಟ್ರಸ್ಟ್‌ಗಳು ರಾಜಕೀಯ ಪಕ್ಷಗಳಿಗೆ ಒಟ್ಟು 3,811 ಕೋಟಿ ದೇಣಿಗೆ ನೀಡಿವೆ, ಇದು ಹಿಂದಿನ ಹಣಕಾಸು ವರ್ಷ 2023-24ರಲ್ಲಿ ದೇಣಿಗೆ ನೀಡಿದ 1,218 ಕೋಟಿಗಿಂತ ಮೂರು ಪಟ್ಟು ಹೆಚ್ಚು.
ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ದೇಣಿಗೆ ವಿವರಗಳ ಪ್ರಕಾರ, ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಈ ಮೊತ್ತದ ಅತಿದೊಡ್ಡ ಪಾಲನ್ನು ಪಡೆದುಕೊಂಡಿದೆ. ಬಿಜೆಪಿ 3,112 ಕೋಟಿ ಪಡೆದಿದ್ದು, ಇದು ಒಟ್ಟು ದೇಣಿಗೆಗಳಲ್ಲಿ ಸರಿಸುಮಾರು 82 ಪ್ರತಿಶತವನ್ನು ಪ್ರತಿನಿಧಿಸುತ್ತದೆ.
ಏತನಧ್ಯೆ, ಕಾಂಗ್ರೆಸ್ ಸುಮಾರು 299 ಕೋಟಿ ಪಡೆದಿದ್ದು, ಇದು ಒಟ್ಟು ದೇಣಿಗೆಗಳಲ್ಲಿ ಸರಿಸುಮಾರು 8 ಪ್ರತಿಶತವನ್ನು ಪ್ರತಿನಿಧಿಸುತ್ತದೆ. ಇತರ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟು 400 ಕೋಟಿ ಪಡೆದಿದ್ದು, ಇದು ಒಟ್ಟು ದೇಣಿಗೆಗಳಲ್ಲಿ ಸರಿಸುಮಾರು 10 ಪ್ರತಿಶತವನ್ನು ಪ್ರತಿನಿಧಿಸುತ್ತದೆ.
ಪ್ರಸ್ತುತ ದೇಶದಲ್ಲಿ 19 ಚುನಾವಣಾ ಟ್ರಸ್ಟ್‌ಗಳು ನೋಂದಾಯಿಸಲ್ಪಟ್ಟಿವೆ, ಆದರೆ ಡಿಸೆಂಬರ್ 20ರ ಹೊತ್ತಿಗೆ, ಕೇವಲ 13 ಟ್ರಸ್ಟ್‌ಗಳ ಕೊಡುಗೆ ವಿವರಗಳು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿವೆ ಎಂದು ವರದಿ ಹೇಳುತ್ತದೆ. ಇವುಗಳಲ್ಲಿ, ಒಂಬತ್ತು ಟ್ರಸ್ಟ್‌ಗಳು ದೇಣಿಗೆಗಳನ್ನು ವರದಿ ಮಾಡಿದರೆ, ನಾಲ್ಕು ಟ್ರಸ್ಟ್‌ಗಳು (ಜನ್ಹಿತ್, ಪರಿವರ್ತನ್, ಜೈ ಹಿಂದ್ ಮತ್ತು ಜೈ ಭಾರತ್) 2024-25ರ ಆರ್ಥಿಕ ವರ್ಷದಲ್ಲಿ ಯಾವುದೇ ದೇಣಿಗೆ ನೀಡಿಲ್ಲ.
ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಈ ವರ್ಷ ಬಿಜೆಪಿಯ ಅತಿದೊಡ್ಡ ದಾನಿಯಾಗಿ ಹೊರಹೊಮಿದ್ದು, ಬಿಜೆಪಿಗೆ 2,180.07 ಕೋಟಿ ದೇಣಿಗೆ ನೀಡಿದೆ. ಪ್ರುಡೆಂಟ್ ಟ್ರಸ್ಟ್ ಜಿಂದಾಲ್ ಸ್ಟೀಲ್ ಪವರ್, ಮೇಘಾ ಎಂಜಿನಿಯರಿಂಗ್, ಭಾರ್ತಿ ಏರ್ಟೆಲ್, ಅರಬಿಂದೋ ಫಾರ್ಮಾ ಮತ್ತು ಟೊರೆಂಟ್ ಫಾರ್ಮಾಸ್ಯುಟಿಕಲ್‌್ಸನಂತಹ ಪ್ರಮುಖ ಕಂಪನಿಗಳಿಂದ ದೇಣಿಗೆಗಳನ್ನು ಪಡೆದುಕೊಂಡಿದೆ.
ಟ್ರಸ್ಟ್ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದಿ ಪಕ್ಷ ಮತ್ತು ತೆಲುಗು ದೇಶಂ ಪಕ್ಷಕ್ಕೂ ದೇಣಿಗೆ ನೀಡಿದ್ದರೂ, ಸರಿಸುಮಾರು ಶೇಕಡಾ 82 ದೇಣಿಗೆಗಳು ಬಿಜೆಪಿಗೆ ಹೋಗಿವೆ.
ಯಾರು ಯಾರಿಗೆ ಎಷ್ಟು ದಾನ ? 2024-25ರಲ್ಲಿ ಪೊರೀಗ್ರೆಸ್ಸಿವ್ ಎಲೆಕ್ಟೋರಲ್ ಟ್ರಸ್ಟ್ 917 ಕೋಟಿ ಸಂಗ್ರಹಿಸಿ, ರಾಜಕೀಯ ಪಕ್ಷಗಳಿಗೆ 914.97 ಕೋಟಿ ದೇಣಿಗೆ ನೀಡಿತು. ಇದರಲ್ಲಿ ಶೇ.80.82ರಷ್ಟು ಬಿಜೆಪಿಗೆ ದೇಣಿಗೆ ನೀಡಿತು. ಟಾಟಾ ಸನ್‌್ಸ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್ ಮತ್ತು ಟಾಟಾ ಪವರ್ ಸೇರಿದಂತೆ ಟಾಟಾ ಗ್ರೂಪ್ ಕಂಪನಿಗಳು ಈ ಟ್ರಸ್ಟ್‌ನ ಪ್ರಮುಖ ದಾನಿಗಳಾಗಿದ್ದಾರೆ.
ಇತರ ಟ್ರಸ್ಟ್‌ಗಳಲ್ಲಿ ಜನಪ್ರಗತಿ ಎಲೆಕ್ಟೋರಲ್ ಟ್ರಸ್ಟ್ ಕೆಇಸಿ ಇಂಟರ್‌ನ್ಯಾಷನಲ್ ಲಿಮಿಟೆಡ್‌ನಿಂದ 1.02 ಕೋಟಿ ಪಡೆದುಕೊಂಡಿದ್ದು, ಅದರಲ್ಲಿ 1 ಕೋಟಿಯನ್ನು ಶಿವಸೇನೆ (ಯುಬಿಟಿ)ಗೆ ನೀಡಲಾಗಿದೆ. ಹಾರ್ಮನಿ ಎಲೆಕ್ಟೋರಲ್ ಟ್ರಸ್ಟ್ 35.65 ಕೋಟಿ ದೇಣಿಗೆ ಪಡೆದು ಬಿಜೆಪಿಗೆ 30.15 ಕೋಟಿ ದೇಣಿಗೆ ನೀಡಿದೆ. ನ್ಯೂ ಡೆಮಾಕ್ರಟಿಕ್ ಎಲೆಕ್ಟೋರಲ್ ಟ್ರಸ್ಟ್ ಮಹೀಂದ್ರಾ ಗ್ರೂಪ್ ಕಂಪನಿಗಳಿಂದ 160 ಕೋಟಿ ಪಡೆದಿದ್ದು, ಅದರಲ್ಲಿ 150 ಕೋಟಿ ಬಿಜೆಪಿಗೆ ನೀಡಲಾಗಿದೆ. ಟ್ರಯಂಫ್ ಎಲೆಕ್ಟೋರಲ್ ಟ್ರಸ್ಟ್ ಒಟ್ಟು 25 ಕೋಟಿಯಲ್ಲಿ 21 ಕೋಟಿ ಬಿಜೆಪಿಗೆ ದೇಣಿಗೆ ನೀಡಿದೆ.
