ಮುಂಬೈ, ಜ.14- ದೇಶದ ವಾಣಿಜ್ಯರಾಜಧಾನಿ ಮುಂಬೈನ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ.ನಾಳೆ ನಡೆಯಲಿರುವ ಮತದಾನದಲ್ಲಿ ಮತ ಚಲಾಯಿಸಲು ಮತದಾರರ ಫೋಟೋ ಐಡಿ ಕಾರ್ಡ್ ಅಥವಾ ರಾಜ್ಯ ಚುನಾವಣಾ ಆಯೋಗ ಅನುಮೋದಿಸಿದ 12 ಪರ್ಯಾಯ ಗುರುತಿನ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸುವುದು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಕೆ ಬೆಳಿಗ್ಗೆ 7.30 ರಿಂದ ಸಂಜೆ 5.30 ರವರೆಗೆ 227 ವಾರ್ಡ್ಗಳಲ್ಲಿ ಮತದಾನ ನಡೆಯಲಿದ್ದು, ಶುಕ್ರವಾರ ಮತ ಎಣಿಕೆ ನಡೆಯಲಿದೆ.878 ಮಹಿಳೆಯರು ಮತ್ತು 822 ಪುರುಷರು ಸೇರಿದಂತೆ ಒಟ್ಟು 1,700 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
1,03,44,315 ಮತದಾರರಿದ್ದು,ಇದರಲ್ಲಿ 55,15,707 ಪುರುಷರು, 48,26,509 ಮಹಿಳೆಯರು ಮತ್ತು 1,099 ಇತರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಮಂಗಳವಾರ, ಪೌರ ಆಯುಕ್ತರು ಮತ್ತು ಜಿಲ್ಲಾ ಚುನಾವಣಾ ಅಧಿಕಾರಿ ಭೂಷಣ್ ಗಗ್ರಾಣಿ ಅವರು ಮತದಾರರು ಭಾವಚಿತ್ರವಿರುವ ಗುರುತಿನ ಚೀಟಿಯನ್ನು ತೋರಿಸುವ ಮೂಲಕ ಮತಗಟ್ಟೆಯಲ್ಲಿ ತಮ್ಮ ಗುರುತನ್ನು ದೃಢಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮತದಾರರಿಗೆ ಅಗತ್ಯವಿರುವ ಎಲ್ಲಾ ಅಗತ್ಯ ಸೌಲಭ್ಯ ಲಭ್ಯವಾಗುವಂತೆ ನೋಡಿಕೊಳ್ಳಲು ಹೆಚ್ಚುವರಿ ಪುರಸಭೆ ಆಯುಕ್ತೆ ಅಶ್ವಿನಿ ಜೋಶಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ವಿಕಲಚೇತನರಿಗೆ ತಕ್ಷಣದ ಮತ್ತು ಸಮರ್ಪಕ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಅವರು ವಿಶೇಷ ಒತ್ತು ನೀಡಿದರು ಮತ್ತು ಮೊಬೈಲ್ ಶೌಚಾಲಯಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಮತದಾನ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಳನ್ನು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನವರಿ 14 ರಿಂದ 16 ರವರೆಗೆ ಮತದಾನ ಕೇಂದ್ರಗಳು ಮತ್ತು ಎಣಿಕೆ ಕೇಂದ್ರಗಳ ಸುತ್ತಲೂ ವಿಶೇಷ ಸ್ವಚ್ಛತಾ ಅಭಿಯಾನವನ್ನು ನಡೆಸುವಂತೆಯೂ ಜೋಶಿ ಘನತ್ಯಾಜ್ಯ ನಿರ್ವಹಣಾ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
