ಬೆಂಗಳೂರು,ಜ.23-ಮದ್ಯ ಸೇವಿಸಿ ಶಾಲಾ ವಾಹನ ಚಾಲನೆ ಮಾಡುತ್ತಿದ್ದ ಚಾಲಕರು ಗಳ ವಿರುದ್ಧ ನಗರ ಸಂಚಾರಿ ಪೊಲೀಸರು ಇಂದು ಬೆಳಗ್ಗೆಯಿಂದಲೇ ವಿಶೇಷ ಕಾರ್ಯಾಚರಣೆ ಕೈಗೊಂಡು 26 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ.
ಇಂದು ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 5110 ಶಾಲಾ ವಾಹನಗಳನ್ನು ತಪಾಸಣೆ ಮಾಡಲಾಯಿತು.
ಆ ಸಂದರ್ಭದಲ್ಲಿ ಮದ್ಯ ಸೇವಿಸಿ ಶಾಲಾ ವಾಹನ ಚಾಲನೆ ಮಾಡುತ್ತಿದ್ದ 26 ಚಾಲಕರ ವಿರುದ್ಧ ಐಎಂವಿ ಕಾಯ್ದೆಯಡಿ ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು, ಅವರುಗಳ ಚಾಲನಾ ಅನುಜ್ಞಾ ಪತ್ರಗಳನ್ನು ಸಂಬಂಧಪಟ್ಟ ಆರ್ಟಿಓ ಕಚೇರಿಗೆ ಅಮಾನತು ಪಡಿಸಲು ಸಲ್ಲಿಸಲಾಗುವುದು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಏಕಮುಖ ಸಂಚಾರ:5458 ಪ್ರಕರಣ ದಾಖಲು :
ನಗರ ದಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಹಮಿಕೊಂಡಿದ್ದಾರೆ.ಏಕಮುಖ ರಸ್ತೆಗಳಲ್ಲಿ ವಿರುದ್ಧವಾಗಿ ವಾಹನಗಳನ್ನು ಚಲಾಯಿಸುವ ಚಾಲಕರು ಹಾಗೂ ಸವಾರರ ವಿರುದ್ಧ ನಗರದಾದ್ಯಂತ ಜ.21 ರಿಂದ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ನಿನ್ನೆ ಹಾಗೂ ಮೊನ್ನೆ ಎರಡು ದಿನಗಳ ವಿಶೇಷ ಕಾರ್ಯಾಚರಣೆಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಒಟ್ಟು 5458 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.ಸಾರ್ವಜನಿಕರ ಸುರಕ್ಷತ ಸಂಚಾರವನ್ನು ಗಮನದಲ್ಲಿ ಟ್ಟುಕೊಂಡು ಈ ವಿಶೇಷ ಕಾರ್ಯಾಚರಣೆಯನ್ನು ನಿರಂತರವಾಗಿ ಮುಂದುವರೆಸ ಲಾಗುವುದು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
