Sunday, December 14, 2025
Homeರಾಷ್ಟ್ರೀಯಕಾಂಗ್ರೆಸ್ಸಿಗರು ಸೋಲಿಗೆ ಹೆದುರುವುದಿಲ್ಲ ಗೆಲುವಿಗೆ ಹಿಗ್ಗುವುದಿಲ್ಲ : ಡಿಕೆಶಿ

ಕಾಂಗ್ರೆಸ್ಸಿಗರು ಸೋಲಿಗೆ ಹೆದುರುವುದಿಲ್ಲ ಗೆಲುವಿಗೆ ಹಿಗ್ಗುವುದಿಲ್ಲ : ಡಿಕೆಶಿ

DK Shivakumar

ನವದೆಹಲಿ, ಡಿ.14- ಕಾಂಗ್ರೆಸ್ಸಿಗರು ಸೋಲಿಗೆ ಹೆದುರುವುದಿಲ್ಲ ಗೆಲುವಿಗೆ ಹಿಗ್ಗುವುದಿಲ್ಲ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪಕ್ಷದ ಹಿರಿಯ ನಾಯಕರ ತ್ಯಾಗ-ಬಲಿದಾನದ ಬಗ್ಗೆ ಮಾತನಾಡಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಗಳ್ಳತನ ವಿರುದ್ಧ ಇಂದು ನಡೆಯಲಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಬಿಜೆಪಿ ನಾನಾ ರೀತಿಯ ಕಸರತ್ತು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಮತಗಳ್ಳತನ ಪ್ರತಿಭಟನೆಯಲ್ಲಿ ಭಾಗವಹಿಸಲು ಕರ್ನಾಟಕದಿಂದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ನಾಯಕರು ಆಗಮಿಸುತ್ತಾರೆ. ಕೆಪಿಸಿಸಿ ವತಿಯಿಂದ 1500 ಜನರಿಗೆ ವ್ಯವಸ್ಥೆ ಮಾಡಲಾಗಿತ್ತು. ಅದಕ್ಕೂ ಮೀರಿ ಜನ ಬಂದಿದ್ದಾರೆ ಎಂದರು.

ಪ್ರತಿಭಟನೆಯನ್ನು ವಿಫಲಗೊಳಿಸಲು ಕೇಂದ್ರ ಸರ್ಕಾರ ನಾನಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ. ದೆಹಲಿಗೆ ಬರುವ ವಾಹನಗಳನ್ನು ತಡೆಯುವ ಪ್ರಯತ್ನಗಳಾಗುತ್ತಿವೆ. ಪ್ರತಿಭಟನೆಯಿಂದ ಕೇಂದ್ರ ಸರ್ಕಾರ ನಡುಗಿಹೋಗಿರುವ ಎಷ್ಟೇ ಪ್ರಯತ್ನಪಟ್ಟರೂ ನಮ ಪ್ರತಿಭಟನೆ ಯಶಸ್ವಿಯಾಗುತ್ತದೆ ಎಂದಿದ್ದಾರೆ.

ಮತಗಳ್ಳತನದ ವಿರುದ್ಧ ಕರ್ನಾಟಕದಲ್ಲಿ ಒಂದು ಕೋಟಿ 42 ಲಕ್ಷ ಸಹಿ ಸಂಗ್ರಹಿಸಲಾಗಿದೆ. ಅದನ್ನು ಇಂದು ಪ್ರತಿಭಟನೆಯಲ್ಲಿ ವರಿಷ್ಠರಿಗೆ ಹಸ್ತಾಂತರಿಸುವುದಾಗಿ ಹೇಳಿದರು. ಬಿಜೆಪಿಯ ಪ್ರಯತ್ನಗಳಿಗೆ ನಾವು ಹೆದರುವುದಿಲ್ಲ ದೇಶದ 140 ಕೋಟಿ ಜನರ ಮತದಾನದ ಹಕ್ಕನ್ನು ಉಳಿಸಲು ಪ್ರಯತ್ನ ನಡೆಸುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸುವರಿಗಾಗಿ ಕಪ್ಪು ಬಣ್ಣದ ಟಿ ಶರ್ಟ್‌ಗಳನ್ನು ದೆಹಲಿಯ ಚಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.ಕಾಂಗ್ರೆಸ್‌‍ ಸೋಲಿನ ಹತಾಶೆಯಿಂದ ಪ್ರತಿಭಟನೆ ನಡೆಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿರುವುದನ್ನು ಕೇಳಿದ್ದೇನೆ. ಅವರ ಖುಷಿಗೆ ಏನು ಬೇಕಾದರೂ ಮಾತನಾಡಿಕೊಳ್ಳಲಿ. ಕಾಂಗ್ರೆಸ್‌‍ ಪಕ್ಷ ಸೋಲು-ಗೆಲುವಿಗೆ ಯೋಚಿಸುವುದಿಲ್ಲ. ನಮ ಪಕ್ಷದ ಹಿರಿಯರು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದಾರೆ ಎಂದರು.

ದೇಶಕ್ಕೆ ಸಂವಿಧಾನ ತಂದು ಕೊಟ್ಟಿದ್ದೇವೆ. ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನು ಆರ್ಥಿಕ ತಜ್ಞರಾದ ಮನಮೋಹನ್‌ ಸಿಂಗ್‌ ಅವರಿಗೆ ಬಿಟ್ಟು ಕೊಟ್ಟಿದ್ದರು. ಜವಾಹರ್‌ ಲಾಲ್‌ ನೆಹರು, ಮಹಾತ ಗಾಂಧೀಜಿ ಜೈಲಿನಲ್ಲಿದ್ದರು. ಇಂದಿರಾಗಾಂಧಿ, ರಾಜೀವ್‌ ಗಾಂಧಿ ಪ್ರಾಣ ತ್ಯಾಗ ಮಾಡಿದರು. ಈಗ ಸಂಕಷ್ಟ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಅಧ್ಯಕ್ಷರಾಗಿದ್ದಾರೆ ಎಂದು ಡಿಕೆ ಶಿವಕುಮಾರ್‌ ಹೇಳಿದರು.ಕಾಂಗ್ರೆಸ್‌‍ ಕಚೇರಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡುವುದಾಗಿಯೂ ಹೇಳಿದರು. ಇದೇ ವೇಳೆ ದೆಹಲಿಯಲ್ಲಿ ಹಲವಾರು ಶಾಸಕರು ಹಾಗೂ ಸಚಿವರನ್ನು ಡಿ.ಕೆ.ಶಿವಕುಮಾರ್‌ ಭೇಟಿ ಮಾಡಿ ಮಾತುಕತೆ ನಡೆಸಿದರು.

RELATED ARTICLES

Latest News