ನವದೆಹಲಿ, ಜ.2- ಹೊಸ ವರ್ಷಾಚರಣೆ ವೇಳೆ ಕೂಗಬೇಡಿ, ಜೋರಾಗಿ ಸಂಗೀತ ನುಡಿಸಬೇಡಿ ಎಂದು ಹೇಳಿದ್ದಕ್ಕೆ ಟೈಲರ್‌ನನ್ನು ಗುಂಪೊಂದು ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಿರುವ ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಮೃತನನ್ನು ಶಾಸ್ತ್ರಿನಗರದಲ್ಲಿ ದರ್ಜಿಯಾಗಿ ಕೆಲಸ ಮಾಡುತ್ತಿದ್ದ ಬಿಹಾರಿ ಲಾಲ್ (50)ಎಂದು ಗುರುತಿಸಲಾಗಿದೆ. ಹತ್ಯೆಗೆ ಸಂಬಂಧಿಸಿದಂತೆ ಒಬ್ಬ ಬಾಲಾಪರಾಧಿಯನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿಯ ಪತ್ತೆಗೆ ಪೊಲೀಸರು ಶೋಧ ಕೈಗೊಂಡಿದ್ದಾರೆ.
ಕಳೆದ ರಾತ್ರಿ ಗುಂಪು ಕೂಗಾಡುತ್ತಾ, ಜೋರಾಗಿ ಸಂಗೀತ ನುಡಿಸುತ್ತಿದ್ದರು. ಇದಕ್ಕೆ ಬಿಹಾರಿ ಲಾಲ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ವಾಗ್ವಾದ ಉಂಟಾಗಿ ಮಾತಿನ ಚಕಮಕಿಗೆ ನಡೆದಿದೆ. ಈ ಸಮಯದಲ್ಲಿ 9ನೇ ತರಗತಿಯಿಂದ ಹೊರಗುಳಿದ ಬಾಲಾಪರಾಧಿಗಳಲ್ಲಿ ಒಬ್ಬ ಲಾಲ್‌ಗೆ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡ ಬಿಹಾರ್‌ಲಾಲ್‌ನನ್ನು ಬಾಬು ಜಗಜೀವನ್‌ರಾಮ್ ಸಾರಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ತಪಾಸಣೆ ನಡೆಸಿದ ವೈದ್ಯರು ಆತ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಬಾಲಾಪರಾಧಿಯನ್ನು ಬಂಧಿಸಲಾಗಿದ್ದು, ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಸ್ತುತ ತಲೆಮರೆಸಿಕೊಂಡಿರುವ ಎರಡನೇ ಆರೋಪಿಯನ್ನು ಪತ್ತೆಹಚ್ಚಲು ಬಂಧಿಸಲು ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
