ನವದೆಹಲಿ,ಜ.7- ಇಲ್ಲಿನ ರಾಮಲೀಲಾ ಮೈದಾನ ಪ್ರದೇಶದಲ್ಲಿನ ಸೈಯ್ಯದ್ ಫೈಜ್ ಇಲಾಹಿ ಮಸೀದಿಯ ಸಮೀಪ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಹಿಂಸಾಚಾರ ಭುಗಿಲೆದ್ದಿದ್ದು ಕನಿಷ್ಠ ಪಕ್ಷ ಐವರು ಪೊಲೀಸರು ಗಾಯಗೊಂಡಿದ್ದಾರೆ.
ದೆಹಲಿ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ದೆಹಲಿ ಮುನಿಸಿಪಲ್ ಕಾರ್ಪೊರೇಷನ್ ವತಿಯಿಂದ ತುರ್ಕಮನ್ ಗೇಟ್ ಬಳಿ ಮಸೀದಿ ಮತ್ತು ಹತ್ತಿರದ ಸಶಾನವೊಂದಕ್ಕೆ ಹೊಂದಿಕೊಂಡಿದ್ದ ಅಕ್ರಮ ಕಟ್ಟಡ ನೆಲಸಮ ಮಾಡುತ್ತಿದ್ದಾಗ ಘರ್ಷಣೆ ಉಂಟಾಯಿತು.
ಕಾರ್ಯಾಚರಣೆ ವೇಳೆ ಮಸೀದಿಗೆ ಹಾನಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉದ್ರಿಕ್ತ ಜನರ ಗುಂಪನ್ನು ಚದುರಿಸಲು ಪೊಲೀಸರು ಅಶ್ರವಾಯು ಸೆಲ್ ಸಿಡಿಸಬೇಕಾಯಿತು. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು ಎಂದು ದೆಹಲಿ ಪೊಲೀಸರು ಹೇಳಿಕೆ ನೀಡಿದ್ದಾರೆ.
ದೆಹಲಿ ಮಹಾನಗರ ಪಾಲಿಕೆ ಜನವರಿ 6 ಮತ್ತು 7ರ ನಡುರಾತ್ರಿ ಅಕ್ರಮ ಕಟ್ಟಡ ನೆಲಸಮ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಇದಕ್ಕಾಗಿ ಪೊಲೀಸ್ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಲಾಗಿತ್ತು. ಹೀಗಿದ್ದರೂ ಪಾಲಿಕೆಯ ಯಂತ್ರಗಳು, ಜೆಸಿಬಿ ಬರುವ ಮುನ್ನ 100-150 ಜನರು ಗುಂಪುಗೂಡಿ ಕಾರ್ಯಾಚರಣೆ ಆರಂಭಿಸಿದಾಗ ಕಲ್ಲು ತೂರಾಟ ನಡೆಸಿದರು. ಇದರಿಂದ ಸ್ಥಳದಲ್ಲಿ ಗೊಂದಲದ ಸನ್ನಿವೇಶ ಸೃಷ್ಟಿಯಾಯಿತು ಎಂದು ಪೊಲೀಸ್ ಉಪ ಆಯುಕ್ತ (ಕೇಂದ್ರ) ನಿಧಿನ್ ವಲ್ಸನ್ ಅವರು ತಿಳಿಸಿದರು.
ಉದ್ರಿಕ್ತ ಗುಂಪಿನ ಮನವೊಲಿಕೆ ಮಾಡಿ ಚದುರಿಸಲಾಯಿತಾದರೂ ಕೆಲವರು ಕಲ್ಲು ತೂರಾಟದಲ್ಲಿ ತೊಡಗಿದರು. ಆಗ ಐವರು ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ನಾವು ಗುಂಪನ್ನು ಚದುರಿಸಲು ಅಶ್ರವಾಯು ಸೆಲ್ ಪ್ರಯೋಗಿಸಬೇಕಾಯಿತು ಎಂದು ಡಿಸಿಪಿ ವಿವರಿಸಿದರು.
ವೈದ್ಯಕೀಯ ವರದಿಗಳು ಬಂದ ಬಳಿಕ ಮತ್ತು ಹೇಳಿಕೆಗಳನ್ನು ದಾಖಲಿಸಿಕೊಂಡ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.ಮಸೀದಿಯ ಸಮೀಪದ ಒಂದು ಸಭಾಂಗಣ ಮತ್ತು ಔಷಧಾಲಯ ಒತ್ತುವರಿ ಮಾಡಿ ನಿರ್ಮಾಣಗೊಂಡಿವೆ ಎಂದು ನ್ಯಾಯಾಲಯ ಘೋಷಿಸಿತ್ತು ಎಂದು ಅವರು ನುಡಿದರು.
