Sunday, January 11, 2026
Homeರಾಜಕೀಯ"ಜೆಡಿಎಸ್‌‍ ನಾಯಕರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ತಮ್ಮ ಅನುಕೂಲಕ್ಕಾಗಿ"

“ಜೆಡಿಎಸ್‌‍ ನಾಯಕರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ತಮ್ಮ ಅನುಕೂಲಕ್ಕಾಗಿ”

JDS leaders allied with BJP for their own benefit

ಬೆಂಗಳೂರು, ಜ.11- ಜೆಡಿಎಸ್‌‍ ನಾಯಕರು ಬಿಜೆಪಿ ಜೊತೆಯಲ್ಲಿ ಮೈತ್ರಿ ಮಾಡಿಕೊಂಡಿರುವುದು ತಮ್ಮ ಅನುಕೂಲಕ್ಕಾಗಿಯೇ ಹೊರತು, ಕಾರ್ಯಕರ್ತರ ಹಿತಾಸಕ್ತಿಗಾಗಿ ಅಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ನರೇಂದ್ರ ಮೋದಿಯವರನ್ನು ಕಾಂಗ್ರೆಸ್ಸಿಗಿಂತಲೂ ಹೆಚ್ಚು ಟೀಕಿಸಿದ್ದು ಜೆಡಿಎಸ್‌‍ ನ ವರಿಷ್ಠರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮತ್ತು ಅವರ ಪುತ್ರ ಎಚ್‌.ಡಿ.ಕುಮಾರಸ್ವಾಮಿ ಅವರು. ಈಗ ಅವರೇ ಬಿಜೆಪಿಗೆ ಹತ್ತಿರವಾಗಿದ್ದಾರೆ. ಬಿಜೆಪಿ ನಾಯಕರ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ಇದನ್ನು ನೈತಿಕತೆ ಎನ್ನಲು ಸಾಧ್ಯವೇ ಎಂದು ಹೇಳಿದರು.

ಈ ಮೊದಲು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಬಿಜೆಪಿ ವಿರುದ್ಧ ಬಹಳ ಕೆಟ್ಟದಾಗಿ ಟೀಕೆ ಮಾಡುತ್ತಿದ್ದರು. ತಮನ್ನು ತಾವು ಜಾತ್ಯತೀತರು ಎಂದು ಹೇಳಿಕೊಳ್ಳುತ್ತಿದ್ದರು. ಅದಕ್ಕಾಗಿ ಕಾಂಗ್ರೆಸ್‌‍ ಕೋಮುವಾದಿ ಪಕ್ಷಕ್ಕೆ ಅಧಿಕಾರ ಸಿಗಬಾರದು ಎಂದು ಜೆಡಿಎಸ್‌‍ ಜೊತೆ ಮೈತ್ರಿ ಮಾಡಿಕೊಂಡಿದ್ದೆವು. ಅದನ್ನು ಕೆಟ್ಟದಾಗಿ ವ್ಯಾಖ್ಯಾನಿಸಿ ಕಾಂಗ್ರೆಸ್‌‍ನವರೇ ನಮ ಮನೆ ಬಾಗಿಲಿಗೆ ಬಂದು ಅಧಿಕಾರಕೊಟ್ಟರು ಎಂದು ಹೇಳುತ್ತಿದ್ದಾರೆ. ಜೆಡಿಎಸ್‌‍ನವರು ಅವಕಾಶ ಸಿಕ್ಕಾಗ ಕಾಂಗ್ರೆಸ್‌‍ ಜೊತೆಗೂ ಸರ್ಕಾರ ಮಾಡಿದೆ, ಬಿಜೆಪಿಯ ಜೊತೆಯಲ್ಲೂ ಸರ್ಕಾರ ರಚನೆ ಮಾಡಿದೆ. ಕಾಂಗ್ರೆಸ್‌‍ ಪಕ್ಷ ಮಾತ್ರ ಬಿಜೆಪಿಯನ್ನು ಆಗಲೂ ಕೋಮುವಾದಿ ಎಂದು ಕರೆಯುತ್ತಿತ್ತು. ಈಗಲೂ ಅದೇ ನಿಲುವಿಗೆ ಬದ್ಧವಾಗಿದೆ ಎಂದರು.

ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿಯವರ ನಡವಳಿಕೆಯಿಂದ ಅಸಮಾಧಾನಗೊಂಡಿದ್ದ ಶಾಸಕರು ಸರ್ಕಾರದಿಂದ ಹೊರಬಂದರು. ಬಿಜೆಪಿ ಸರ್ಕಾರ ರಚಿಸಿತ್ತು ಎಂದರು.

ಕುಮಾರಸ್ವಾಮಿ ಒಂದು ಸಚಿವ ಸ್ಥಾನಕ್ಕಾಗಿ ದೇಶದ ಹಿತಾಸಕ್ತಿಯನ್ನೇ ಮರೆತಿದ್ದಾರೆ. ಒಂದು ವೇಳೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳದೆ ಇದ್ದರೆ ಮನ್ರೆಗಾ ಹೆಸರು ಬದಲಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ, ಬಿಜೆಪಿಗೆ ಎಷ್ಟೆಲ್ಲಾ ಕೆಟ್ಟದಾಗಿ ಬೈಯುತ್ತಿದ್ದರು ಎಂದು ನಮಗೆ ಅಂದಾಜಿದೆ. ಈಗ ಬಿಜೆಪಿ ಸರ್ಕಾರದಲ್ಲಿ ಸಚಿವನಾಗಿದ್ದೇನೆ ಎಂದು ವಿಬಿ-ಜಿ ರಾಮ್‌ ಜಿ ಯೋಜನೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಎಂದರು.

ಸಿದ್ದರಾಮಯ್ಯ ಅವರು ರಾಜಕೀಯದಲ್ಲಿ ಯಶಸ್ವಿ ನಾಯಕ 2013ರಲ್ಲಿ ಮತ್ತು 2023ರಲ್ಲಿ ಸ್ಪಷ್ಟ ಬಹುಮತ ಪಡೆದು ಮುಖ್ಯಮಂತ್ರಿಯಾಗಿದ್ದಾರೆ. ಕುಮಾರಸ್ವಾಮಿ ಯಶಸ್ವಿ ನಾಯಕರಲ್ಲ. ಅವರು ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿಲ್ಲ. ನಾನು ಆಕಸಿಕ ಮುಖ್ಯಮಂತ್ರಿ, ಸಾಂದರ್ಭಿಕ ಶಿಶು ಎಂದು ಕುಮಾರಸ್ವಾಮಿಯವರೇ ಹೇಳಿಕೊಂಡಿದ್ದಾರೆ. ಪ್ರಶ್ನೆ ಮತ್ತು ಉತ್ತರ ಎರಡೂ ಅವರ ಮಾತುಗಳಲ್ಲೇ ಇದೆ ಎಂದರು.

ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ಸ್ವಂತ ಬಲದ ಮೇಲೆ ಅಧಿಕಾರ ಗಳಿಸಿವೆ. ಮಾಜಿ ಪ್ರಧಾನಿಯ ಮಗನಾಗಿರುವ ಕುಮಾರಸ್ವಾಮಿಯವರಿಗೆ ಆ ರೀತಿ ಬಹುಮತ ಗಳಿಸಲು ಏಕೆ ಸಾಧ್ಯವಾಗಲಿಲ್ಲ ? ಎಂದು ಪ್ರಶ್ನಿಸಿದರು.

113 ಶಾಸಕರು ಗೆಲ್ಲದೆ ಇದ್ದರೆ ಜೆಡಿಎಸ್‌‍ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಹೆಚ್‌.ಡಿ.ದೇವೇಗೌಡರು ಹೇಳಿದ್ದರು. ಈಗ ಅವರು ಬಿಜೆಪಿಗೆ ಹತ್ತಿರದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.

ಲೋಕಸಭೆ ಚುನಾವಣೆಯ ಬಳಿಕ ಎಲ್ಲಾ ಚುನಾವಣೆಗಳಲ್ಲೂ ರಾಜಕೀಯ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್‌‍-ಬಿಜೆಪಿ ಮುಂದಾಗಿವೆ. ಈ ಮೈತ್ರಿ ಕಾರ್ಯಕರ್ತರ ಹಿತಾಸಕ್ತಿಗೆ ಪೂರಕವಾಗಿಲ್ಲ. ಸ್ವಂತ ಅನುಕೂಲಕ್ಕಾಗಿ ಕುಮಾರಸ್ವಾಮಿ ಮೈತ್ರಿ ಮಾಡಿಕೊಂಡಿದ್ದಾರೆ. ಕೇಂದ್ರ ಸಚಿವ ಸ್ಥಾನ ನೀಡಿದ್ದಕ್ಕಾಗಿ ಮೈತ್ರಿ ಮಾಡಿಕೊಂಡಿದ್ದಾರೆ. ಇಲ್ಲದೆ ಇದ್ದರೆ ಮೈತ್ರಿ ಮಾಡಿಕೊಳ್ಳುತ್ತಿದ್ದರೆ? ಎಂದು ಪ್ರಶ್ನಿಸಿದರು.

ಜೆಡಿಎಸ್‌‍-ಬಿಜೆಪಿಯ ಮೈತ್ರಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಸೀಮಿತವಾಗುತ್ತದೆಯೇ ಅಥವಾ ಸ್ಥಳೀಯ ಸಂಸ್ಥೆಗಳಿಗೂ ಮುಂದುವರೆಯುತ್ತದೆಯೇ ? ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ಮೈತ್ರಿ ಮುರಿದು ಬೀಳಲಿದೆಯೇ? ಯಾವುದು ಸ್ಪಷ್ಟವಾಗಿಲ್ಲ ಎಂದು ಹೇಳಿದರು.

RELATED ARTICLES

Latest News