Wednesday, December 17, 2025
Homeರಾಜ್ಯಗೃಹಲಕ್ಷ್ಮಿ ಯೋಜನೆ ಕಂತುಗಳ ಪಾವತಿ ಕುರಿತು ತಪ್ಪು ಮಾಹಿತಿ ನೀಡಿದ್ದಕ್ಕೆ ಕ್ಷಮೆ ಕೇಳಿದ ಲಕ್ಷ್ಮಿ ಹೆಬ್ಬಾಳ್ಕರ್‌

ಗೃಹಲಕ್ಷ್ಮಿ ಯೋಜನೆ ಕಂತುಗಳ ಪಾವತಿ ಕುರಿತು ತಪ್ಪು ಮಾಹಿತಿ ನೀಡಿದ್ದಕ್ಕೆ ಕ್ಷಮೆ ಕೇಳಿದ ಲಕ್ಷ್ಮಿ ಹೆಬ್ಬಾಳ್ಕರ್‌

Lakshmi Hebbalkar apologizes for giving wrong information

ಬೆಳಗಾವಿ, ಡಿ.17- ರಾಜ್ಯ ಸರ್ಕಾರದ ಮಹತ್ವಕಾಂಷೆಯ ಗೃಹಲಕ್ಷ್ಮಿ ಯೋಜನೆ ಮಾಸಿಕ ಕಂತುಗಳ ಪಾವತಿಯ ವಿಚಾರವಾಗಿ ತಪ್ಪು ಮಾಹಿತಿ ನೀಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕಾರ್‌ ವಿಧಾನಸಭೆಯಲ್ಲಿ ಪೇಚಿಗೆ ಸಿಲುಕಿ ಕ್ಷಮೆ ಕೇಳಬೇಕಾದ ಪ್ರಸಂಗ ಬಂದಿತ್ತು.

ಡಿಸೆಂಬರ್‌ 9ರಂದು ವಿಧಾನಸಭೆಯ ಪ್ರಶ್ನೋತ್ತರದ ವೇಳೆ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಶಾಸಕ ಮಹೇಶ್‌ ಟೆಂಗಿನಕಾಯಿ ಗೃಹಲಕ್ಷ್ಮೀ ಕಂತು ಪಾವತಿ ಕುರಿತು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರ ನೀಡಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ 2025ರ ಆಗಸ್ಟ್‌ ವರೆಗೂ ಎಲ್ಲಾ ಕಂತುಗಳು ಪಾವತಿಯಾಗಿದೆ ಎಂದು ಉತ್ತರಿಸಿದ್ದರು. ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಕಂತು ಪಾವತಿಯಾಗಿಲ್ಲ ಎಂದು ಶಾಸಕರು ವಾದಿಸಿದ್ದರು. ಆಗಸ್ಟ್‌ ವರೆಗು ಕಂತು ಪಾವತಿಯಾಗಿದೆ ಎಂದಾದ ಮೇಲೆ ಮೊದಲಿನ ಎರಡು ತಿಂಗಳ ಕಂತುಗಳು ಬಿಡುಗಡೆಯಾಗಿದೆ ಎಂದು ಶಾಸಕರು ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವರು ಖಾರವಾಗಿ ಹೇಳಿದ್ದರು.

ಅನಂತರ ಬಿಜೆಪಿ ಶಾಸಕರು ಗದಗ, ಬಾಗಲಕೋಟೆ ಮತ್ತಿತರ ಜಿಲ್ಲೆಗಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಂದ ಮಾಹಿತಿ ಪಡೆದು ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಹಣ ಬಿಡುಗಡೆಯಾಗಿಲ್ಲ ಎಂದು ಆಧಾರ ಸಹಿತ ವಿಧಾನಸಭೆಯಲ್ಲಿ ಮತ್ತೆ ಪ್ರಸ್ತಾಪಿಸಿದ್ದರು. ಈ ಕುರಿತು ಮುಖ್ಯಮಂತ್ರಿಯವರು ಆ ಕ್ಷಣವೇ ಪ್ರತಿಕ್ರಿಯೆ ನೀಡಿ, ಒಂದು ವೇಳೆ ಎರಡು ಕಂತುಗಳು ಪಾವತಿಯಾಗದಿದ್ದರೆ ತಕ್ಷಣ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಇದಕ್ಕೆ ಸುಮನಾಗದ ವಿರೋಧ ಪಕ್ಷಗಳ ನಾಯಕರು ಸಚಿವರೇ ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಇಂದು ಈ ವಿಚಾರ ಗದ್ದಲಕ್ಕೆ ಕಾರಣವಾಗಿತ್ತು. ವಿರೋಧ ಪಕ್ಷಗಳು ಧರಣಿ ಕೂಡ ನಡೆಸಿದ್ದವು.

ಖುದ್ದು ಸದನಕ್ಕೆ ಹಾಜರಾದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಇಂದು ಸ್ಪಷ್ಟನೆ ನೀಡಿ, ಗೃಹಲಕ್ಷ್ಮಿ ಯೋಜನೆ ದೇಶಕ್ಕೆ ಮಾದರಿಯಾಗಿದೆ ರಾಜ್ಯದ 1.26 ಕೋಟಿ ಮನೆಯ ಯಜಮಾನಿಯರಿಗೆ ಯಾವುದೇ ಮಧ್ಯವರ್ತಿ ಇಲ್ಲದೆ ನೇರ ನಗದು ಪಾವತಿಯ ಮೂಲಕ ಗೃಹಲಕ್ಷ್ಮಿ ಹಣವನ್ನು ಪಾವತಿಸಲಾಗುತ್ತಿದೆ. ಇಲ್ಲಿಯವರೆಗೂ 23 ಕಂತುಗಳಲ್ಲಿ 46 ಸಾವಿರ ರೂಪಾಯಿಗಳನ್ನು ಸಂದಾಯ ಮಾಡಲಾಗಿದೆ ಎಂದು ವಿವರಿಸಿದರು.

ಮೊನ್ನೆ ವಿಧಾನಸಭೆಯಲ್ಲಿ ಶಾಸಕ ಮಹೇಶ್‌ ಟೆಂಗಿನಕಾಯಿ ಪ್ರಶ್ನೆ ಕೇಳಿದಾಗ ಆಗಸ್ಟ್‌ ತಿಂಗಳ ವರೆಗೂ ಹಣ ಸಂದಾಯ ಮಾಡಲಾಗಿದೆ ಎಂದು ತಿಳಿಸಿದ್ದೇನೆ. ತಾವು ಮೊದಲ ಬಾರಿ ಸಚಿವರಾಗಿದ್ದು ಅತ್ಯಂತ ಪೂಜ್ಯ ಭಾವನೆಯಿಂದ ಗೃಹಲಕ್ಷ್ಮಿ ಯೋಚನೆಯನ್ನು ತಲುಪಿಸಲಾಗುತ್ತಿದೆ. ಆಗಸ್ಟ್‌ ವರೆಗೂ ಎಲ್ಲಾ ಕಂತುಗಳನ್ನು ಪಾವತಿಸಲಾಗಿದೆ ಎಂದು ನಾನು ಭಾವಿಸಿಕೊಂಡಿದ್ದೆ. ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಹಣ ಹಾಕಿಲ್ಲ ಎಂದು ಪದೇ ಪದೇ ಕೇಳಿದಾಗ ನಾನು ಎಲ್ಲಾ ಪಾವತಿಯಾಗಿದೆ ಎಂದು ಉತ್ತರ ನೀಡಿರಬಹುದು. ಇದರ ಅರ್ಥ ಸದನಕ್ಕೆ ತಪ್ಪು ಮಾಹಿತಿ ನೀಡುವ ಉದ್ದೇಶ ಇರಲಿಲ್ಲ. ಎರಡು ತಿಂಗಳ ಹಣ ಪಾವತಿಯಾಗಿಲ್ಲ ಎಂಬುದು ನನಗೆ ಪರಿಶೀಲನೆಯ ಬಳಿಕ ಸ್ಪಷ್ಟವಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಚರ್ಚೆ ಮಾಡಿ ಎರಡು ತಿಂಗಳ ಹಣವನ್ನು ಪಾವತಿಸಲು ಕ್ರಮ ಕೈಗೊಳ್ಳುತ್ತೇವೆ. ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಹಣ ವ್ಯತ್ಯಯವಾಗಿರುವುದಕ್ಕೆ ಕಾರಣ ಹುಡುಕುತ್ತೇವೆ. ಆ ಹಣವನ್ನು ಬೇರೆ ಯಾವ ಉದ್ದೇಶಕ್ಕೂ ಬಳಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.ಸಚಿವರು ತಪ್ಪು ಮಾಹಿತಿ ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ ಮೊದಲು ಕ್ಷಮೆ ಕೊಡಲಿ ಎಂದು ಆರ್‌.ಅಶೋಕ್‌ ಮತ್ತು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್‌ ಮತ್ತಿತರರು ಒತ್ತಾಯಿಸಿದರು.
ಸಚಿವರು ಮೊದಲು ಉತ್ತರ ಪೂರ್ಣಗೊಳಿಸಲು ಅವಕಾಶ ನೀಡಿ ಎಂದು ಸಭಾಧ್ಯಕ್ಷರು ಸಮಾಧಾನ ಪಡಿಸಿದರು.

ನಂತರ ಸಚಿವ ಲಕ್ಷ್ಮಿ ಹೆಬ್ಬಾಳಕರ್‌, ಸದನವನ್ನು ತಪ್ಪು ದಾರಿಗೆ ಎಳೆಯುವ ಉದ್ದೇಶ ತಮಗೆ ಇರಲಿಲ್ಲ. ಬಾಕಿ ಕಂತುಗಳನ್ನು ಶೀಘ್ರವೇ ಪಾವತಿ ಮಾಡುತ್ತೇವೆ. ನನ್ನ ಮಾತಿನಿಂದ ಯಾರ ಭಾವನೆಗಾದರೂ ಧಕ್ಕೆಯಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದರು.

ಆರ್‌.ಅಶೋಕ್‌, ಸಚಿವರ ಉತ್ತರದಿಂದ ತಪ್ಪು ಮಾಹಿತಿ ನೀಡಿರುವುದು ಸ್ಪಷ್ಟವಾಗಿದೆ. ಕ್ಷಮೆ ಕೇಳುವ ಬದಲಾಗಿ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಎನ್ನುತ್ತಿದ್ದಾರೆ. ಇಲ್ಲಿ ನಮ ಮನಸ್ಸಿಗೆ ನೋವಾಗುವುದು ಮುಖ್ಯವಲ್ಲ ಜನರ ಮನಸ್ಸಿಗೆ ನೋವಾಗಿದೆ. ನೇರವಾಗಿ ಕ್ಷೇಮ ಕೇಳಬೇಕು. ಎರಡು ತಿಂಗಳ ಬಾಕಿ ಕಂತನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಬೇಕು ಎಂದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವೆ ಸಚಿವ ಎಚ್‌.ಕೆ.ಪಾಟೀಲ್‌ ಮಧ್ಯ ಪ್ರವೇಶಿಸಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಇಲ್ಲಿಗೆ ಮುಗಿಸಿ ಮುಂದಿನ ಕಲಾಪವನ್ನು ಕೈಗೆತ್ತಿಕೊಳ್ಳಬೇಕು ಎಂದು ಮಾಡಿದ್ದರು.
ವಿ.ಸುನಿಲ್‌ ಕುಮಾರ್‌, ಪ್ರತಿಕ್ರಿಯೆ ನೀಡಿ ಗೃಹಲಕ್ಷ್ಮಿ ಯೋಜನೆ ಒಳ್ಳೆಯ ಕಾರ್ಯಕ್ರಮ ಎಂಬುದಕ್ಕೆ ನಮ ಸಹಮತ ಇದೆ. ಸಚಿವರು ಮತ್ತು ಮುಖ್ಯಮಂತ್ರಿ ಅವರು ಆಗಸ್ಟ್‌ ತಿಂಗಳವರೆಗೂ ಹಣ ಪಾವತಿಯಾಗಿದೆ ಎಂದೇ ವಾದಿಸಿದ್ದರು. ರಾಜ್ಯ ಸರ್ಕಾರ ದಿವಾಳಿಯಾಗಿದೆ. ಅದಕ್ಕಾಗಿ ಘೋಷಿತ ಗ್ಯಾರಂಟಿ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸಲಾಗುತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳಲಿ ಎಂದು ಒತ್ತಾಯಿಸಿದರು.

ಈ ಹಂತದಲ್ಲಿ ಆಡಳಿತ ಪಕ್ಷದ ಶಾಸಕರು ಪ್ರಶ್ನೋತ್ತರಕ್ಕೆ ಅವಕಾಶ ಮಾಡಿಕೊಡಬೇಕು ಒತ್ತಾಯಿಸಿದರು. ಸಚಿವರ ವಿಷಾಧದ ಬಳಿಕವೂ ವಿರೋಧಪಕ್ಷಗಳ ಹಠ ಸರಿಯಲ್ಲ ಎಂದು ಆಕ್ಷೇಪಿಸಿದರು.ವಿ.ಸುನೀಲ್‌ ಕುಮಾರ್‌, ಬಾಕಿ ಎರಡು ತಿಂಗಳ ಹಣವನ್ನು ಪಾವತಿ ಮಾಡಿ ಸಚಿವರು ಸದನಕ್ಕೆ ಬಂದು ಉತ್ತರ ನೀಡಿದ್ದರೆ ಒಪ್ಪಿಕೊಳ್ಳಬಹುದಿತ್ತು. ಆದರೆ ಆ ರೀತಿ ಮಾಡಿಲ್ಲ ಎಂದು ವಿರೋಧಿಸಿದರು.

ಎರಡು ತಿಂಗಳ ಹಣ ಪಾವತಿ ಆಗಿಲ್ಲ ಎಂಬುದು ಮಹೇಶ್‌ ಟೆಂಗಿನಕಾಯಿ ಪ್ರಸ್ತಾಪಿಸಿದ ಮೇಲೆ ತಿಳಿದು ಬಂದಿದೆ. ಅಧಿಕಾರಿಗಳಿಗೆ ಈ ವಿಚಾರ ಮೊದಲೆ ಗೊತ್ತಿರಲಿಲ್ವೇ ಎಂದು ಅರಗ ಜ್ಞಾನೇಂದ್ರ ಪ್ರಶ್ನಿಸಿದರು.ಸಚಿವ ಭೈರತಿ ಸುರೇಶ್‌, ರಾಜ್ಯದ ಬಡವರಿಗೆ ಒಂದೇ ಒಂದು ರೂಪಾಯಿ ನೀಡಲು ಸಾಮರ್ಥ್ಯ ಇಲ್ಲದ ಬಿಜೆಪಿಯವರು ಕಾಂಗ್ರೆಸ್‌‍ ಯೋಜನೆಗಳನ್ನು ಟೀಕಿಸುತ್ತಾರೆ ಎಂದು ತಿರುಗೇಟು ನೀಡಿದರು.

ಇದು ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಆಡಳಿತ ಪಕ್ಷದಿಂದ ಕೆ.ಎಂ. ಶಿವಲಿಂಗೇಗೌಡ, ಬೇಳೂರು ಗೋಪಾಲಕೃಷ್ಣ ಮತ್ತಿತರರು ಬಿಜೆಪಿ ವಿರುದ್ಧ ಹರಿಹಾಯ್ದರು. ಪ್ರತಿಪಕ್ಷಗಳಿಂದ ಅರಗ ಜ್ಞಾನೇಂದ್ರ, ಸುನಿಲ್‌ ಕುಮಾರ್‌, ವೇದ ವ್ಯಾಸ ಕಾಮತ್‌, ಚನ್ನಬಸಪ್ಪ ಸೇರಿದಂತೆ ಹಲವರು ಕಾಂಗ್ರೆಸ್‌‍ ವಿರುದ್ಧ ತಿರುಗಿ ಬಿದ್ದರು. ವಾದ ಪ್ರತಿವಾದಗಳು ಗದ್ದಲಕ್ಕೆ ಕಾರಣವಾಯಿತು.

ಹೆಚ್ಚಿನ ಚರ್ಚೆ ಬೇಡ ವಿಷಯ ಮುಗಿಸಲು ಸಹಕಾರ ನೀಡಿ ಎಂದು ಸಭಾಧ್ಯಕ್ಷರು ಹೇಳಿದಾಗ, ಸಚಿವರು ಉತ್ತರ ನೀಡುವಾಗ ಆಡಿದ ಮಾತುಗಳನ್ನು ಕಡತದಿಂದ ತೆಗೆಸುವುದಾದರೆ ನಾವು ಒಪ್ಪಿಕೊಳ್ಳುತ್ತೇವೆ. ಇಲ್ಲವಾದರೆ ಈ ರೀತಿ ಸುಳ್ಳು ಹೇಳುವ ಪರಿಪಾಠಗಳು ಮುಂದುವರಿಯುತ್ತವೆ ಎಂದು ಆರ್‌.ಅಶೋಕ್‌ ಅಸಮಾಧಾನ ವ್ಯಕ್ತಪಡಿಸಿದರು.

RELATED ARTICLES

Latest News