ಲಕ್ನೋ, ಜ.2- ಮದುವೆ ಆಮೀಷವೊಡ್ಡಿದ ವೈದ್ಯರೊಬ್ಬರು ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಅತ್ಯಾಚಾರ ನಡೆಸಿದ್ದೇ ಅಲ್ಲದೆ, ವಿದ್ಯಾರ್ಥಿನಿಯ ಖಾಸಗಿ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ವೈದ್ಯ ಬೆದರಿಕೆ ಹಾಕಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ವಿಶ್ವಜೀತ್ ಶ್ರೀವಾಸ್ತವ ತಿಳಿಸಿದ್ದಾರೆ.
ಇಂಟರ್ನ್ ವೈದ್ಯನ ಹಿನ್ನೆಲೆ ಮತ್ತು ವಿಳಾಸಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಯನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ. ನರ್ಸಿಂಗ್ ವಿದ್ಯಾರ್ಥಿನಿಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ಆರೋಪಿಯು ನನ್ನ ಜೊತೆ ಹಲವು ಬಾರಿ ದೈಹಿಕ ಸಂಬಂಧ ಹೊಂದಿದ್ದ ಎಂದು ನರ್ಸಿಂಗ್ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಕಿಯಾಸರ್‌ಬಾಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮದುವೆಯಾಗುವಂತೆ ಒತ್ತಾಯಿಸಿದಾಗ ಆರೋಪಿ ನಿರಾಕರಿಸಿದ್ದಾನೆ. ಅಲ್ಲದೇ, ಆಕೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಳೆದ ಹದಿನೈದು ದಿನಗಳಲ್ಲಿ ಸಂಸ್ಥೆಯಲ್ಲಿ ವರದಿಯಾದ ಎರಡನೇ ಪ್ರಕರಣ ಇದು. ಇದಕ್ಕೂ ಮೊದಲು, ಪಶ್ಚಿಮ ಬಂಗಾಳದ ವೈದ್ಯರೊಬ್ಬರು ಸಹ ವೈದ್ಯನ ವಿರುದ್ಧ ದೂರು ದಾಖಲಿಸಿದ್ದರು. ವೈದ್ಯನ ವಿರುದ್ಧ ಲವ್ ಜಿಹಾದ್ ಆರೋಪ ಮಾಡಿದ್ದರು. ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸಿದ್ದ ಎಂದು ದೂರು ನೀಡಲಾಗಿತ್ತು.
