ನವದೆಹಲಿ,ಜ.7- ಇಸ್ಲಾಮಾಬಾದ್ ದಶಕಗಳಿಂದ ಭಯೋತ್ಪಾದನೆಯನ್ನು ಬಹಿರಂಗವಾಗಿ ಬೆಂಬಲಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಆರೋಪಿಸಿದ್ದಾರೆ.
ಲಕ್ಸೆಂಬರ್ಗ್‌ನಲ್ಲಿ ಭಾರತದ ನೆರೆಹೊರೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಪಾಕಿಸ್ತಾನವು ನೆರೆಯ ರಾಜ್ಯದ ವಿರುದ್ಧ ಹೊಂದಿರುವ ನೀತಿಗಳನ್ನು ಇಂದು ಬೇರೆ ಯಾವುದೇ ದೇಶ ಅನುಸರಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನ ದಶಕಗಳಿಂದಲೂ ತರಬೇತಿ ಶಿಬಿರಗಳನ್ನು ಹೊಂದಿದ್ದು, ಅವುಗಳಲ್ಲಿ ಹೆಚ್ಚಿನವು ದೊಡ್ಡ ನಗರಗಳಲ್ಲೇವೆ. ಇಲ್ಲಿ ರಾಜ್ಯ ಮಿಲಿಟರಿ ಭಯೋತ್ಪಾದನೆಯನ್ನು ಬೆಂಬಲಿಸಲಾಗುತ್ತಿದೆ. ಇದು ಅವರ ಹಕ್ಕು ಎಂಬಂತೆ ಅವರು ಅದನ್ನು ಸಾಮಾನ್ಯಗೊಳಿಸಲು ಪ್ರಯತ್ನಿಸುತ್ತಾರೆ.
ಅಂತಹ ಹಕ್ಕುಗಳು ಇನ್ನು ಮುಂದೆ ವಿಶ್ವಾಸಾರ್ಹತೆಯನ್ನು ಹೊಂದಿರುವುದಿಲ್ಲ. ಭಾರತವು ತನ್ನ ವಿದೇಶಾಂಗ ನೀತಿಯನ್ನು ರೂಪಿಸುವಾಗ ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು. ನವದೆಹಲಿ ಪ್ರತಿ ನೆರೆಹೊರೆಯವರೊಂದಿಗೆ ಅವರ ನಡವಳಿಕೆಯ ಆಧಾರದ ಮೇಲೆ ವ್ಯವಹರಿಸಬೇಕು ಎಂದು ಜೈಶಂಕರ್ ಒತ್ತಿ ಹೇಳಿದ್ದಾರೆ.
ನಮೊಂದಿಗೆ ಕೆಲಸ ಮಾಡಲು ಮತ್ತು ಸಹಾಯಕವಾಗಿ, ಸಕಾರಾತಕವಾಗಿ ವರ್ತಿಸಲು ಇಚ್ಛಿಸುವವರನ್ನು ನಾವು ಅದೇ ರೀತಿಯಲ್ಲಿಯೇ ನಿಭಾಯಿಸಬೇಕಾಗುತ್ತದೆ. ಪಾಕಿಸ್ತಾನದೊಂದಿಗೆ ಕೆಲಸ ಮಾಡುವವರನ್ನು ನಾವು ಬೇರೆ ರೀತಿಯಲ್ಲೇ ನಿಭಾಯಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
