ಬೆಳಗಾವಿ,ಡಿ.17- ಅಲೆಮಾರಿ ಸಮುದಾಯದವರಿಗೆ ವಿಶೇಷ ಪ್ರಕರಣದಡಿ ಸರ್ಕಾರದ ವತಿಯಿಂದ ಮನೆಗಳನ್ನು ನೀಡುವ ಬಗ್ಗೆ ಪರಿಶೀಲನೆ ಮಾಡಲಿದ್ದೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.
ಸದಸ್ಯ ಡಿ.ಟಿ.ಶ್ರೀನಿವಾಸ್ ಅವರ ಪ್ರಶ್ನೆಗೆ ವಸತಿ , ಅಲ್ಪಸಂಖ್ಯಾತ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಅವರ ಪರವಾಗಿ ಉತ್ತರಿಸಿದ ಸಚಿವರು, ಅಲೆಮಾರಿಗಳಿಗೆ ಶಾಶ್ವತ ಸೂರು ಕಲ್ಪಿಸಬೇಕೆಂಬುದು ಬಹುದಿನದ ಬೇಡಿಕೆಯಾಗಿದೆ. ನಾವು ಯಾರಿಗೆ ಮನೆ ನೀಡಬೇಕಾದರೆ ದಾಖಲೆಗಳು ಇರಬೇಕು. ದಾಖಲೆಗಳು ಇಲ್ಲ ಎಂದರೆ ಕಾನೂನಿನಲ್ಲಿ ಮನೆ ಮಂಜೂರು ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಅಲೆಮಾರಿಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗುವುದರಿಂದ ಅವರಿಗೆ ಶಾಶ್ವತವಾದ ಗುರುತಿನಚೀಟಿಗಳು ಇರುವುದಿಲ್ಲ. ಆದರೂ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮನೆಗಳನ್ನು ಮಂಜೂರು ಮಾಡುತ್ತೇವೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ವಸತಿ ಪುರಸ್ಕೃತ ಯೋಜನೆಯಡಿ ಒಟ್ಟು 7,38,881 ಮನೆಗಳು ಹಂಚಿಕೆ ಮಾಡಲಾಗಿದೆ. ಈಗಾಗಲೇ ಇದರಲ್ಲಿ 3,27,747 ಮನೆಗಳನ್ನು ಮಂಜೂರು ಮಾಡಿದ್ದೇವೆ. ಸರಿಸುಮಾರು 4ಲಕ್ಷ ಮನೆಗಳಿಗೆ ಮಂಜೂರಾತಿ ಕೊಡಬೇಕು. ಈ ವೇಳೆ ಗ್ರಾಮಪಂಚಾಯ್ತಿ ನೀಡುವ ಶಿಫಾರಸ್ಸನ್ನು ಪರಿಗಣಿಸಿ ವಿಶೇಷ ಪ್ರಕರಣದಡಿ ಮನೆಗಳನ್ನು ಅಲೆಮಾರಿಗಳಿಗೆ ನೀಡುವುದಾಗಿ ತಿಳಿಸಿದರು.
