ಬೆಂಗಳೂರು,ಜ.24– ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಸಂಸ್ಥೆಯು ನಂದಿನಿ ಹೊಸ ಉತ್ಪನ್ನಗಳಾದ ಗುಡ್ ಲೈಫ್ ತುಪ್ಪ (ಹೈ ಅರೋಮ), ಪನೀರ್ (ಮೀಡಿಯಂ ಫ್ಯಾಟ್), ಎನ್- ಪ್ರೋಮಿಲ್ಕ್ , ಪ್ರೋಬಯಾಟಿಕ್ ಮೊಸರು ಮತ್ತು ಇತರೆ ಹತ್ತು ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು. ಕೆಎಂಎಫ್ ಸಂಸ್ಥೆಯು ಕಳೆದ 5 ದಶಕಗಳಿಂದ ಗೋವಿನಿಂದ ಗ್ರಾಹಕರವರೆಗೆ ಎಂಬ ಧೈಯವಾಕ್ಯದೊಂದಿಗೆ ಗ್ರಾಹಕರ ಅಭಿರುಚಿ ಮತ್ತು ಆಗತ್ಯಗಳಿಗೆ ಅನುಗುಣವಾಗಿ ನಂದಿನಿ ಬ್ರಾಂಡ್‌ನಲ್ಲಿ 175 ಕ್ಕೂ ಹೆಚ್ಚು ಉತ್ಕೃಷ್ಟ ಗುಣಮಟ್ಟದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸ್ಪರ್ಧಾತಕ ದರಗಳಲ್ಲಿ ಒದಗಿಸುತ್ತಾ ಬರುತ್ತಿದೆ.
ನಂದಿನಿ ಬ್ರಾಂಡ್ ಕರ್ನಾಟಕ ರಾಜ್ಯದ ಮನೆ ಮಾತಾಗಿರುವುದರ ಜೊತೆಗೆ ಹೊರರಾಜ್ಯ ಮತ್ತು ಹೊರದೇಶಗಳಲ್ಲಿಯೂ ಸಹ ಗ್ರಾಹಕರ ವಿಶ್ವಾಸವನ್ನು ಗಳಿಸಿ ಪ್ರತಿಷ್ಠಿತ ಹಾಲಿನ ಬ್ರಾಂಡ್ ಆಗಿ ಗುರುತಿಸಿಕೊಂಡಿದೆ.
ಪ್ರಸ್ತುತ, ಬದಲಾಗುತ್ತಿರುವ ಗ್ರಾಹಕರ ಜೀವನ ಶೈಲಿ ಹಾಗೂ ಆಹಾರ ಅಭಿರುಚಿಗಳನ್ನು ಪರಿಗಣಿಸಿ ನಂದಿನಿ ಬ್ರಾಂಡ್‌ನಲ್ಲಿ ಕ್ಯೂಆರ್ ಕೋಡ್ ಭದ್ರತೆಯೊಂದಿಗೆ ಗುಡ್ ಲೈಫ್ ಉಪಬ್ರಾಂಡ್‌ನಲ್ಲಿ ಹೈ ಆರೋಮ ತುಪ್ಪ, ಕ್ಯೂಆರ್ ಕೋಡ್ ನೊಂದಿಗೆ ಪೆಟ್ ಜಾರ್‌ಗಳಲ್ಲಿ ನಂದಿನಿ ಶುದ್ಧ ತುಪ್ಪ, ಮೀಡಿಯಂ ಫ್ಯಾಟ್ ಪನೀರ್, ಹೆಚ್ಚಿನ ಪ್ರೋಟಿನ್ ಅಂಶವುಳ್ಳ ಹೊಸ ಮಾದರಿಯ ಎನ್-ಪ್ರೋಮಿಲ್ಕ್ , ಪ್ರೋಬಯಾಟಿಕ್ ಮೊಸರು, ಪ್ರೊಬಯಾಟಿಕ್ ಮಾವಿನ ಲಸ್ಸಿ, ಪ್ರೊಬಯಾಟಿಕ್ ಸ್ಟ್ರಾಬೆರಿ ಲಸ್ಸಿ, ಡೇರಿ ವೈಟ್ನರ್, ಬಹು ಬೇಡಿಕೆಯುಳ್ಳ 10 ರೂ. ದರದಲ್ಲಿ ಹಸುವಿನ ಹಾಲು ಮತ್ತು ಮೊಸರು ಉತ್ಪನ್ನಗಳನ್ನು ಹೊಸದಾಗಿ ಅಭಿವೃದ್ಧಿಪಡಿಸಿದೆ.
ಈ ಸಂಧರ್ಭದಲ್ಲಿ ಶಾಸಕ ಹಾಗೂ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ, ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ ಎಸ್.ಜಿಯಾವುಲ್ಲಾ ಕೆಎಂಎಫ್‌ನ ಆಡಳಿತಾಧಿಕಾರಿ ಟಿ.ಹೆಚ್.ಎಂ.ಕುಮಾರ್, ಮುಖ್ಯಮಂತ್ರಿಗಳ ಮಾದ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹಾಗೂ ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ, ಮಾರುಕಟ್ಟೆ ನಿರ್ದೇಶಕ ರಘುನಂದನ್ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
