Sunday, December 14, 2025
Homeರಾಷ್ಟ್ರೀಯವೋಟ್ ಚೋರಿ : ದೆಹಲಿಯ ರಾಮಲೀಲಾ ಮೈದಾನದಲ್ಲಿ ರಾಷ್ಟ್ರಮಟ್ಟದ ಬೃಹತ್‌ ಪ್ರತಿಭಟನೆ

ವೋಟ್ ಚೋರಿ : ದೆಹಲಿಯ ರಾಮಲೀಲಾ ಮೈದಾನದಲ್ಲಿ ರಾಷ್ಟ್ರಮಟ್ಟದ ಬೃಹತ್‌ ಪ್ರತಿಭಟನೆ

Vote Chori : Massive national-level protest at Delhi's Ramlila Maidan

ನವದೆಹಲಿ, ಡಿ.14– ಕೇಂದ್ರ ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ಮತಗಳ್ಳತನದ ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್‌‍ ಪಕ್ಷ ಇಂದು ದೆಹಲಿಯಲ್ಲಿ ರಾಷ್ಟ್ರಮಟ್ಟದ ಬೃಹತ್‌ ಪ್ರತಿಭಟನೆ ನಡೆಸಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಯಲಿದೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ತೆಲಂಗಾಣದ ಮುಖ್ಯಮಂತ್ರಿ ರೇವಂತ್‌ ರೆಡ್ಡಿ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್‌ ಸುಖು ಸಿಂಗ್‌ ಸೇರಿದಂತೆ ಎಲ್ಲಾ ರಾಜ್ಯಗಳ ಶಾಸಕಾಂಗ ಪಕ್ಷಗಳ ನಾಯಕರು ಪ್ರದೇಶ ಕಾಂಗ್ರೆಸ್‌‍ ಅಧ್ಯಕ್ಷರು ಶಾಸಕರು ಸಚಿವರು ಸಂಸದರು ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ವಿವಿಧ ರಾಜ್ಯಗಳಲ್ಲಿ ಮತಗಳ್ಳತನ ಮಾಡಲಾಗಿದೆ ಎಂದು ಕಾಂಗ್ರೆಸ್‌‍ ಗಂಭೀರ ಆರೋಪ ಮಾಡಿದೆ. ಇತ್ತೀಚಿಗೆ ನಡೆದ ಮಹಾರಾಷ್ಟ್ರ, ಬಿಹಾರ ವಿಧಾನಸಭೆ ಚುನಾವಣೆಗಳಲ್ಲೂ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಗೆಲುವಿಗೆ ಮತಗಳ್ಳತನವೇ ಕಾರಣ ಎಂಬುದು ಕಾಂಗ್ರೆಸ್ಸಿನ ಗಂಭೀರ ಆರೋಪವಾಗಿದೆ. ಕೇಂದ್ರದಲ್ಲಿ ಎನ್‌ ಡಿ ಎ ಸರ್ಕಾರ ಅಧಿಕಾರಕ್ಕೆ ಬರಲು ಮತಗಳ್ಳತನವೇ ಕಾರಣ ಎಂದು ರಾಹುಲ್‌ ಗಾಂಧಿ ಹೇಳಿದ್ದರು.

ಕರ್ನಾಟಕದ ಮಹದೇವಪುರ ಮತ್ತು ಅಳಂದ ವಿಧಾನಸಭಾ ಕ್ಷೇತ್ರಗಳಲ್ಲಿ ಮತಗಳ್ಳತನವಾಗಿದೆ ಎಂದು ರಾಹುಲ್‌ ಗಾಂಧಿ ಪತ್ರಿಕಾಗೋಷ್ಠಿ ನಡೆಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದರು. ಅದರ ಬೆನ್ನಲ್ಲೇ ಹಲವಾರು ಕಡೆಗಳಲ್ಲಿ ಕ್ಷೇತ್ರ ಮಟ್ಟದ ಪ್ರತಿಭಟನೆಗಳಾಗಿತ್ತು.

ಕರ್ನಾಟಕದ ಕ್ಷೇತ್ರಗಳಲ್ಲಿ ಮತ್ತು ಮಹಾರಾಷ್ಟ್ರದ ಕೆಲವು ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿರುವುದನ್ನು ರಾಹುಲ್‌ ಗಾಂಧಿ ದಾಖಲೆ ಸಹಿತ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ನಡೆಯುತ್ತಿರುವ ಪ್ರತಿಭಟನೆ ಹೆಚ್ಚು ಗಮನ ಸೆಳೆದಿದೆ.

ಮತಗಳ್ಳತನವನ್ನು ತನಿಖೆಗೆ ಒಳಪಡಿಸಬೇಕು ಎಂಬುದು ಕಾಂಗ್ರೆಸ್ಸಿನ ಒತ್ತಾಯವಾಗಿತ್ತು. ಇತ್ತೀಚೆಗೆ ನ್ಯಾಷನಲ್‌ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್‌ ಗಾಂಧಿ ವಿರುದ್ಧ ಕೇಂದ್ರ ಸರ್ಕಾರ ಮತ್ತೊಂದು ಪ್ರಕರಣ ದಾಖಲಾಗಿದೆ ಹಾಗೂ ಕೆಲವು ಪ್ರಮುಖ ನಾಯಕರುಗಳಿಗೆ ನೋಟಿಸ್‌‍ ನೀಡಲಾಗಿದೆ.

ಇದು ಕಾಂಗ್ರೆಸ್‌‍ ಪಕ್ಷವನ್ನು ಕೆರಳಿಸಿದೆ. ಪ್ರತಿಕಾರ ಎಂಬಂತೆ ಮತಗಳ್ಳತನವನ್ನು ಮುಂದಿಟ್ಟುಕೊಂಡು ಒಂದು ಲಕ್ಷ ಜನರನ್ನು ಸಂಘಟಿಸಿ ದೆಹಲಿಯಲ್ಲಿ ಬೃಹತ ಪ್ರತಿಭಟನೆಯ ಮೂಲಕ ಕಾಂಗ್ರೆಸ್‌‍ ತನ್ನ ಬಲ ಪ್ರದರ್ಶನ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಆರ್‌.ಬಿ.ತಿಮಾಪುರ್‌, ಹಿರಿಯ ಕಾಂಗ್ರೆಸ್‌‍ ನಾಯಕ ಬಿ.ಕೆ.ಹರಿಪ್ರಸಾದ್‌, ಸೇರಿದಂತೆ ಬಹುತೇಕ ಸಚಿವರು, 50ಕ್ಕೂ ಹೆಚ್ಚು ಶಾಸಕರು ನಿನ್ನೆಯೇ ದೆಹಲಿ ತಲುಪಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ ಬೆಂಬಲಿಗರೊಂದಿಗೆ ಇಂದು ದೆಹಲಿಯ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

ಕರ್ನಾಟಕದಲ್ಲಿ ಚಳಿಗಾಲದ ವಿಧಾನ ಮಂಡಳ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ಸಚಿವರು ಇಂದು ರಾತ್ರಿಯೇ ಬೆಳಗಾವಿಗೆ ವಾಪಸ್ಸಾಗಲಿದ್ದಾರೆ ಎಂದು ತಿಳಿದುಬಂದಿದೆ .ಪ್ರತಿಭಟನೆಯಲ್ಲಿ ಭಾಗವಹಿಸುವವರಿಗಾಗಿ ವಿಶೇಷ ರೈಲು ಅಥವಾ ರೈಲು ಭೋಗಿಗಳನ್ನು ವ್ಯವಸ್ಥೆ ಮಾಡಿಕೊಡಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.

ಆದರೆ ರೈಲಿನ ವ್ಯವಸ್ಥೆಗೆ ಕೇಂದ್ರ ಸರ್ಕಾರ ಒಪ್ಪದ ಕಾರಣ, ಜಿಲ್ಲಾ ಉಸ್ತುವಾರಿ ಸಚಿವರು ತಮ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಪ್ರಮುಖ ನಾಯಕರುಗಳನ್ನು ಸ್ವಂತ ಖರ್ಚಿನಲ್ಲಿ ದೆಹಲಿಗೆ ಕರೆದುಕೊಂಡು ಹೋಗಬೇಕು ಎಂದು ಸೂಚನೆ ನೀಡಿದರು. ಅದರಂತೆ ಕೆಲವು ಸಚಿವರು ನೆನ್ನೆಯ ವಿಮಾನದ ಮೂಲಕ ದೆಹಲಿ ತಲುಪಿದ್ದಾರೆ. ಮತ್ತೊಂದಷ್ಟು ಜನ ದೆಹಲಿಗೆ ಪ್ರಯಾಣಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿರುವುದರಿಂದಾಗಿ ಕಾಂಗ್ರೆಸ್ಸಿನ ಪ್ರತಿಭಟನೆ ದೆಹಲಿಯ ಭಯಂಕರ ಚಳಿಯಲ್ಲೂ ರಾಜಕೀಯವನ್ನು ಕಾವೇರಿಸಿತ್ತು.

ಮತಗಳ್ಳತನ ಕಾಂಗ್ರೆಸ್ಸಿನ ಹತಾಶೆಯ ಆರೋಪ ಎಂದು ಬಿಜೆಪಿ ಪದೇಪದೇ ಹೇಳುತ್ತಿದೆ. ಆರೋಪ ಮಾಡುವವರು ಪ್ರಮಾಣ ಪತ್ರದ ಮೂಲಕ ತಮ ಹೇಳಿಕೆಯನ್ನು ಪುನರ್‌ ಪ್ರತಿಪಾದಿಸಿದರೆ ತನಿಖೆ ನಡೆಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ. ಆದರೆ ಆರೋಪ ಮಾಡುವವರು ಪ್ರಮಾಣ ಪತ್ರದ ಮೂಲಕ ತಮ್ಮ ಹೇಳಿಕೆಯ ಮೇಲಿನ ಬದ್ಧತೆಯನ್ನು ಪುನರ್‌ ಪ್ರತಿಪಾದಿಸಲು ನಿರಾಕರಿಸಿದ್ದಾರೆ. ಈವರೆಗೂ ಯಾವ ನಾಯಕರು ಈವರೆಗೂ ಪ್ರಮಾಣ ಪತ್ರ ಸಲ್ಲಿಸಿಲ್ಲ. ಹೀಗಾಗಿ ಕಾಂಗ್ರೆಸ್‌‍ ನ ಪ್ರತಿಭಟನೆ ಕೇವಲ ರಾಜಕೀಯಕ್ಕೆ ಸೀಮಿತ ಎಂಬಂತಾಗಿದೆ.

RELATED ARTICLES

Latest News