Saturday, July 26, 2025
Homeರಾಜ್ಯಎನ್‌ಡಿಎ ಸರ್ಕಾರದಿಂದ ಚುನಾವಣಾ ಆಯೋಗ ದುರುಪಯೋಗದ ವಿರುದ್ಧ ದೇಶಾದ್ಯಂತ ಅಭಿಯಾನ : ಸಿದ್ದರಾಮಯ್ಯ

ಎನ್‌ಡಿಎ ಸರ್ಕಾರದಿಂದ ಚುನಾವಣಾ ಆಯೋಗ ದುರುಪಯೋಗದ ವಿರುದ್ಧ ದೇಶಾದ್ಯಂತ ಅಭಿಯಾನ : ಸಿದ್ದರಾಮಯ್ಯ

Nationwide campaign against misuse of Election Commission by NDA government: Siddaramaiah

ಬೆಂಗಳೂರು, ಜು.26- ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಭಾರತೀಯ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಇದರ ವಿರುದ್ದ ಕಾಂಗ್ರೆಸ್‌‍ ದೇಶಾದ್ಯಂತ ಅಭಿಯಾನವನ್ನು ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಕಳೆದ ಲೋಕಸಭೆ ಚುನಾವಣೆ ವೇಳೆ ಕರ್ನಾಟಕದ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ ಎಂಬ ಲೋಕಸಭೆಯ ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್‌‍ ಮುಖಂಡ ರಾಹುಲ್‌ ಗಾಂಧಿ ಅವರ ಆರೋಪಕ್ಕೆ ಸಮತಿ ಸೂಚಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರಗಳಲ್ಲಿ ಮತಕಳವು ಆಗಿರುವುದಕ್ಕೆ ಸಾಕ್ಷಿಗಳಿವೆ. ಕೆಪಿಸಿಸಿ ವತಿಯಿಂದ ನಡೆಸಿರುವ ಸಂಶೋಧನೆಯಿಂದ ಇದು ಸಾಬೀತಾಗಿದೆ. ಸೂಕ್ತ ಸಂದರ್ಭದಲ್ಲಿ ಆಯೋಗಕ್ಕೆ ಈ ಸಾಕ್ಷ್ಯಾಧಾರಗಳನ್ನು ಒದಗಿಸುವುದಾಗಿ ಹೇಳಿದ್ದಾರೆ.

ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿರುವ ಸಿದ್ದರಾಮಯ್ಯ, ಚುನಾವಣಾ ಆಯೋಗದ ದುರ್ಬಳಕೆ, ಹೊಸದಾಗಿ ಸಮೀಕ್ಷೆ ನಡೆಸಲು ಉದ್ದೇಶಿಸಿರುವ ಜಾತಿಗಣತಿ, ಮುಡಾ ಪ್ರಕರಣ, ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರುಪಯೋಗ ಸೇರಿದಂತೆ ಮತ್ತಿತರ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಬಿಜೆಪಿಯ ದೊಡ್ಡ ಪ್ರಮಾಣದ ಚುನಾವಣಾ ದುರುಪಯೋಗದ ಬಗ್ಗೆ ರಾಹುಲ್‌ ಗಾಂಧಿ ಅವರ ಆರೋಪಗಳನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಕೇಂದ್ರದ ಆಡಳಿತ ಪಕ್ಷವು ಮತದಾರರ ಪಟ್ಟಿಯನ್ನು ದುರ್ಬಳಕೆ ಮಾಡುತ್ತಿದೆ ಮತ್ತು ಭಾರತ ಚುನಾವಣಾ ಆಯೋಗ ಸೇರಿದಂತೆ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

ನಕಲಿ ಹೆಸರುಗಳನ್ನು ಸೇರ್ಪಡೆ ಮಾಡುವಾಗ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದು ರಾಹುಲ್‌ ಆರೋಪವು ಸತ್ಯದಿಂದ ಕೂಡಿದೆ. ಮಹಾರಾಷ್ಟ್ರ, ಹರಿಯಾಣ ಮತ್ತು ಕರ್ನಾಟಕದಲ್ಲಿ ಇಂತಹ ಘಟನೆಗಳು ನಡೆದಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ಇದೇ ಕುತಂತ್ರವನ್ನು ನಡೆಸಲು ಯೋಜಿಸುತ್ತಿದ್ದಾರೆ. ಇದು ಬಿಜೆಪಿಯ ಕಿಡಿಗೇಡಿತನ. ದೇಶಾದ್ಯಂತ ಈ ಕುತಂತ್ರ ನಡೆಸಲಾಗುತ್ತಿದೆ. ಚುನಾವಣಾ ಆಯೋಗವು ಇನ್ನು ಮುಂದೆ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡುತ್ತಿದೆ. ಅದು ಸ್ವತಂತ್ರವಾಗಿಲ್ಲ. ಚುನಾವಣಾ ಆಯೋಗವು ಸ್ವತಂತ್ರವಾಗಿ ಮತ್ತು ನ್ಯಾಯಯುತವಾಗಿ ಕಾರ್ಯನಿರ್ವಹಿಸಬೇಕು, ಆದರೆ ಅದು ಹಾಗೆ ಮಾಡುತ್ತಿಲ್ಲ ಎಂದು ಅನುಮಾನ ಹೊರ ಹಾಕಿದ್ದಾರೆ.

ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಈ ಅಕ್ರಮಗಳನ್ನು ಬಹಿರಂಗಪಡಿಸಲು ಮತ್ತು ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ರಕ್ಷಿಸಲು ಸುಧಾರಣೆ ತರಲು ಕಾಂಗ್ರೆಸ್‌‍ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸುತ್ತದೆ ಎಂದು ಪ್ರಕಟಿಸಿದರು.

ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸುವ ಮಹತ್ವವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಅವರು, ಪ್ರತಿಯೊಂದು ರಾಜ್ಯವೂ ಜಾತಿಗಣತಿಯನ್ನು ಪ್ರಾರಂಭಿಸಬೇಕು. ಅದು ಸಾಮಾಜಿಕ-ಆರ್ಥಿಕ, ಶೈಕ್ಷಣಿಕ, ಉದ್ಯೋಗಾಧಾರಿತ ಮತ್ತು ರಾಜಕೀಯವಾಗಿರಬೇಕು. ಏಕೆಂದರೆ ಸ್ವಾತಂತ್ರ್ಯದ ನಂತರ ವ್ಯಕ್ತಿಯ ಸ್ಥಿತಿ-ಆರ್ಥಿಕ, ರಾಜಕೀಯ ಮತ್ತು ಸ್ವಾತಂತ್ರ್ಯ ಎಲ್ಲರಿಗೂ ತಲುಪಿದೆಯೋ ಇಲ್ಲವೋ, ಸಮಾನತೆ ಬಂದಿದೆಯೋ ಇಲ್ಲವೋ ಎಂಬುದು ಎಲ್ಲರಿಗೂ ತಿಳಿದಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಬದಲಾವಣೆ ತರುವುದು ಮತ್ತು ಅಸಮಾನತೆಯನ್ನು ಹೋಗಲಾಡಿಸುವುದು ಸಂವಿಧಾನದ ಉದ್ದೇಶವಾಗಿದೆ. ತಾನು ಒಬಿಸಿ ಸಲಹಾ ಸಮಿತಿಯ ಸಂಚಾಲಕನಲ್ಲ, ಅನಿಲ್‌ ಜೈಹಿಂದ್‌ ನೇತೃತ್ವದ ಸದಸ್ಯನಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕವು ಸ್ವಂತ ಜಾತಿಗಣತಿಗೆ ಸಂಬಂಧಿಸಿದಂತೆ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಗಡುವನ್ನು ನಿಗದಿತ ಅವಧಿಯೊಳಗೆ ಪೂರೈಸುವ ಭರವಸೆಯನ್ನು ವ್ಯಕ್ತಪಡಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿರುವ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ, ಇದೊಂದು ಸುಳ್ಳು ಪ್ರಕರಣ. ನನಗೆ, ನನ್ನ ಪತ್ನಿ ಹಾಗೂ ನನ್ನ ಕುಟುಂಬಕ್ಕೆ ಅನಗತ್ಯವಾಗಿ ಚಿತ್ರಹಿಂಸೆ ನೀಡುತ್ತಿದ್ದಾರೆ. ಇದು ಪಿಎಂಎಲ್‌ಎ ಕಾಯ್ದೆಯಡಿ ಬರದಿದ್ದರೂ ಅಕ್ರಮ ಹಣ ವರ್ಗಾವಣೆ ಇಲ್ಲ, ಅನಗತ್ಯವಾಗಿ ನನಗೆ ಮತ್ತು ನನ್ನ ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸುಪ್ರೀಂಕೋರ್ಟ್‌ ಸಮನ್‌್ಸ ರದ್ದುಪಡಿಸಿರುವುದು ಸ್ವಾಗತಿಸಿರುವ ಅವರು, ರಾಜಕೀಯ ಮಾಡಬೇಕಾದರೆ ಚುನಾವಣೆಯಲ್ಲಿ ಮಾಡಿ, ಇಲ್ಲಿ ಬೇಡ ಎಂದು ಕೋರ್ಟ್‌ ಸರಿಯಾಗಿಯೇ ಹೇಳಿರುವಂತಿದೆ. ಈ ಪ್ರಕರಣದಲ್ಲಿ ಅಲ್ಲ, ಇ.ಡಿ ಮೂಲಕ ಅಲ್ಲ. ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಂದ ಬಿಜೆಪಿಗೆ ಎಚ್ಚರಿಕೆ ಎಂದು ಒತ್ತಿ ಹೇಳಿದ್ದಾರೆ.

ಜೂನ್‌ 4 ರಂದು 11 ಜನರ ಸಾವಿಗೆ ಕಾರಣವಾದ ಕ್ರೀಡಾಂಗಣದ ಕಾಲ್ತುಳಿತದ ಕುರಿತು ಮಾತನಾಡಿರುವ ಸಿದ್ದರಾಮಯ್ಯ, ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿ ಮೈಕೆಲ್‌ ಡಿ.ಕುನ್ಹಾ ಅವರು ಸಲ್ಲಿಸಿದ ತನಿಖಾ ವರದಿಯನ್ನು ಸಚಿವ ಸಂಪುಟ ಅಂಗೀಕರಿಸಿದೆ.

ಪೊಲೀಸ್‌‍ ಸಿಬ್ಬಂದಿಯನ್ನು ಹೊರತುಪಡಿಸಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌‍ಸಿಎ), ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮತ್ತು ಡಿಎನ್‌ಎ (ಈವೆಂಟ್‌ ಮ್ಯಾನೇಜ್‌ಮೆಂಟ್‌ ಏಜೆನ್ಸಿ) ಅಧಿಕಾರಿಗಳ ವಿರುದ್ಧ ಈಗಾಗಲೇ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟ ಪೊಲೀಸ್‌‍ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲಾಗುವುದು ಎಂದು ಅವರು ಹೇಳಿದರು.

RELATED ARTICLES

Latest News