ಬೆಂಗಳೂರು, ಮೇ.7- ಆಪರೇಷನ್ ಸಿಂಧೂರ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಗತ್ಯ ಇರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಭದ್ರತೆ ನಿಯೋಜಿಸಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಕ್ಷಣಾ ಸಚಿವಾಲಯ ಕ್ರಮ ತೆಗೆದುಕೊಂಡಿರುವುದಕ್ಕೆ ನಮ್ಮೆಲ್ಲರ ಬೆಂಬಲ ಇದೆ.
ದೇಶದ ಹಿತ ಕಾಪಾಡಲು ಎಲ್ಲರೂ ಒಟ್ಟಾಗಿದ್ದೇವೆ ಎಂದು ಈಗಾಗಲೇ ಹೇಳಿದ್ದೇವೆ. ಇಡೀ ಜನಸಮುದಾಯ ಹಾಗೂ ಸರ್ಕಾರ ಕೇಂದ್ರದ ಜೊತೆಗಿರಲಿದ್ದೇವೆ. ಕೇಂದ್ರ ಗೃಹಸಚಿವಾಲಯ ಈಗಾಗಲೇ ಮಾರ್ಗಸೂಚಿಗಳನ್ನು ಕಳುಹಿಸಿ ನಾಗರಿಕ ರಕ್ಷಣೆಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸಲಹೆ ನೀಡಿದೆ ಎಂದರು.
ಎಲ್ಲೆಲ್ಲಿ ವಿದ್ಯುತ್ ಉತ್ಪಾದನೆ, ನೀರು ಸಂಗ್ರಹಣೆ ಅಣೆಕಟ್ಟು, ಬಂದರು ಸೇರಿದಂತೆ ಸೂಕ್ಷ್ಮ ಪ್ರದೇಶಗಳಿಗೆ ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ಗುಪ್ತಚರ ದಳವನ್ನು ಚುರುಕುಗೊಳಿಸಲಾಗಿದ್ದು, ಮಾಹಿತಿ ಸಂಗ್ರಹಕ್ಕೆ ಅಣಿಗೊಳಿಸಲಾಗಿದೆ. ಕೇಂದ್ರದ ತನಿಖಾ ಸಂಸ್ಥೆಗಳ ಜೊತೆ ಕೇಂದ್ರ ಸಂಪರ್ಕದಲ್ಲಿರಲಾಗಿದೆ ಎಂದರು.
ನಾಗರಿಕ ಭದ್ರತಾ ವ್ಯವಸ್ಥೆಯನ್ನು ಡ್ರಿಲ್ ಮಾಡಲು ಸೂಚಿಸಲಾಗಿದೆ. ಹಾಗಾಗಿ ಅಗ್ನಿಶಾಮಕ ದಳಗಳ ಎಲ್ಲಾ ಕೇಂದ್ರ ಕಚೇರಿಗಳಲ್ಲಿ ಇಂದು ಸಂಜೆ 4 ಗಂಟೆಗೆ ಅಣಕು ಪ್ರದರ್ಶನ ನಡೆಸಲಾಗುವುದು. ಕೇಂದ್ರ ಸರ್ಕಾರ ಅಗತ್ಯವಿರುವ ಕಡೆ ತನ್ನದೇ ಆದ ಭದ್ರತೆ ಮಾಡಿಕೊಂಡಿದೆ. ರಾಜ್ಯ ಸರ್ಕಾರದ ಜವಾಬ್ದಾರಿ ಇರುವ ಕಡೆ ನಾವು ಸಾಕಷ್ಟು ಭದ್ರತೆಗಳನ್ನು ತೆಗೆದುಕೊಂಡಿದ್ದೇವೆ. ಅಣುಸ್ಥಾವರ, ಕೈಗಾರಿಕೆಗಳು, ಸರ್ಕಾರಿ ಸಂಸ್ಥೆಗಳು ಎಲ್ಲಾ ಕಡೆ ಸೂಕ್ಷ್ಮದೃಷ್ಟಿಯಿಂದ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದರು.
ಪಾಕಿಸ್ತಾನದ ಪ್ರಜೆಗಳನ್ನು ವಾಪಸ್ ಕಳುಹಿಸಲಾಗಿದೆ. ಎಫ್‌ಆರ್‌ಆರ್ ಜೊತೆ ಸಂಪರ್ಕದಲ್ಲಿದ್ದೇವೆ. ಬಾಕಿ ಇರುವವರನ್ನೂ ಕಳುಹಿಸುತ್ತೇವೆ ಎಂದರು. ನಮ್ಮ ನಡುವಿನ ವ್ಯತ್ಯಾಸಗಳೇನೇ ಇದ್ದರೂ ದೇಶದ ವಿಚಾರ ಬಂದಾಗ ಐಕ್ಯತೆಯನ್ನು ಪ್ರದರ್ಶಿಸುವುದು ಅಗತ್ಯ. ರಕ್ಷಣೆಯಂತಹ ವಿಚಾರಗಳಲ್ಲಿ ಬೇರೆ ಚರ್ಚೆಗಳೇ ಇಲ್ಲ. ಈ ಕಾರಣಕ್ಕೆ ರಾಯಚೂರಿನ ಸಮಾವೇಶವನ್ನು ಕಾಂಗ್ರೆಸ್ ರದ್ದುಗೊಳಿಸಿದೆ ಎಂದು ಹೇಳಿದರು.