ಬೆಂಗಳೂರು, ಮೇ 4- ರಾಜ್ಯದ 381 ಪರೀಕ್ಷಾ ಕೇಂದ್ರಗಳಲ್ಲಿ ಇಂದು ಯುಜಿ ನೀಟ್ ಪರೀಕ್ಷೆ ನಡೆಯಿತು. ಇಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪರೀಕ್ಷ ನಡೆದಿದೆ. 1,49,000 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.
ಇಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30ವರೆಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಅವಕಾಶ ನೀಡಲಾಗಿತ್ತು. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಪತ್ರದೊಂದಿಗೆ ಕಾಲೇಜಿನಿಂದ ನೀಡಿರುವ ಗುರುತಿನಚೀಟಿ, ಆಧಾರ್ ಕಾರ್ಡ್ ಸೇರಿದಂತೆ ಅಂಗೀಕೃತ ಗುರುತಿನ ಚೀಟಿ ಜೊತೆ, ಒಂದು ಪೋಸ್ಟ್ ಕಾರ್ಡ್ ಮತ್ತು ಎರಡು ಪಾಸ್ ಪೋರ್ಟ್ ಅಳತೆಯ ಫೋಟೋಗಳೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಿದ್ದರು.
ನಿಯೋಜಿತ ಪೊಲೀಸ್ ಸಿಬ್ಬಂದಿಯಿಂದ ವಿದ್ಯಾರ್ಥಿಗಳ ಸುರಕ್ಷತಾ ತಪಾಸಣೆ ನಡೆಸಲಾಯಿತು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿದ್ದು, ವಿದ್ಯಾರ್ಥಿಗಳು ಪ್ರವೇಶ ಪತ್ರದಲ್ಲಿ ನೀಡಲಾಗಿರುವ ಸೂಚನೆಗಳನ್ವಯ ಮಾರ್ಗಸೂಚಿಯನ್ನು ಪಾಲಿಸಬೇಕೆಂದು ಸೂಚಿಸಲಾಗಿತ್ತು.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಿಗೆ ನಿಯೋಜಿತ ಅಧಿಕಾರಿ/ಸಿಬ್ಬಂದಿಯನ್ನು ಹೊರತುಪಡಿಸಿ, ಇತರ ಯಾವುದೇ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ.