ನವದೆಹಲಿ,ಜೂ.13- ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ಎಂಬಿಬಿಎಸ್, ಬಿಡಿಎಸ್ ಸೇರಿದಂತೆ ವಿವಿಧ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದಿದ್ದ ನೀಟ್ ಪರೀಕ್ಷೆಯಲ್ಲಿ ಕೃಪಾಂಕಗಳನ್ನು ಪಡೆದಿದ್ದ 1563 ಅಭ್ಯರ್ಥಿಗಳ ಅಂಕಪಟ್ಟಿಯನ್ನು ರದ್ದುಪಡಿಸಿ ಮರುಪರೀಕ್ಷೆ ನಡೆಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. ಈ 1563 ಅಭ್ಯರ್ಥಿಗಳಿಗೆ ಮರು ಪರೀಕ್ಷೆಗೆ ಹಾಜರಾಗಲು ಆಯ್ಕೆಯನ್ನು ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಪರ ವಕೀಲರಾದ ಕನು ಅಗರ್ವಾಲ್ ಅವರು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.
ಆ ವಿದ್ಯಾರ್ಥಿಗಳು ಮರು ಪರೀಕ್ಷೆಯನ್ನು ತೆಗೆದುಕೊಳ್ಳಲು ಬಯಸದಿದ್ದರೆ, ಮೇ 5ರಂದು ನಡೆದ ಪರೀಕ್ಷೆಯ ಆಧಾರದ ಮೇಲೆ ಅವರ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಮತ್ತು ಸಂದೀಪ್ ಮೆಹ್ರಾ ಅವರನ್ನೊಳಗೊಂಡ ರಜಾಕಾಲದ ಪೀಠಕ್ಕೆ ಮಾಹಿತಿ ನೀಡಿದ್ದಾರೆ.
ಜೂನ್ 12 ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ರಚಿಸಿದ್ದ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಮರುಪರೀಕ್ಷೆಗೆ ಹಾಜರಾಗಲು ಇಚ್ಛಿಸದ ವಿದ್ಯಾರ್ಥಿಗಳ ಫಲಿತಾಂಶಗಳು ಮೇ 5ರಂದು ನಡೆದ ಪರೀಕ್ಷೆಗಳ ಅಂಕಗಳನ್ನು ಆಧರಿಸಿದೆ. ನೀಟ್-ಯುಜಿ 24 ಕೌನ್ಸಿಲ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸದಿರುವ ತನ್ನ ನಿರ್ಧಾರವನ್ನು ಸುಪ್ರೀಂಕೋರ್ಟ್ ಪುನರುಚ್ಚಿಸಿದೆ.
ಕೌನ್ಸಿಲಿಂಗ್ ನಿಗದಿತವಾಗಿ ಮುಂದುವರೆಯುತ್ತದೆ. ಯಾವುದೇ ಅಡ್ಡಿಯಾಗುವುದಿಲ್ಲ. ಪರೀಕ್ಷೆ ಮುಂದುವರೆದರೆ ಉಳಿದವು ನಿಗದಿತ ಪ್ರಕಾರ ಅದಕ್ಕೆ ಸರಿಯಾಗಿ ನಡೆಯುತ್ತದೆ.
ಆದ್ದರಿಂದ ಇಲ್ಲಿ ಯಾವುದೇ ಆತಂಕಕ್ಕೆ ಕಾರಣವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನೀಟ್ ಪರೀಕ್ಷೆ ಬರೆದಿದ್ದ 1563 ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿದ್ದರ ಬಗ್ಗೆ ದೇಶಾದ್ಯಂತ ಭಾರೀ ವಿವಾದ ಕೇಳಿಬಂದಿತ್ತು. ಪರೀಕ್ಷೆ ಪ್ರಕ್ರಿಯೆಗಳಲ್ಲಿ ವ್ಯಾಪಕವಾದ ಅಕ್ರಮಗಳನ್ನು ನಡೆಸಲಾಗಿತ್ತು ಎಂಬುದು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಅಳಲಾಗಿತ್ತು.
ಇದೀಗ ಕೇಂದ್ರ ಸರ್ಕಾರ ಕೃಪಾಂಕ ಪಡೆದಿದ್ದ 1563 ವಿದ್ಯಾರ್ಥಿಗಳ ಅಂಕಗಳನ್ನು ರದ್ದುಪಡಿಸಿ ಅವರಿಗೆ ಜೂ.23ರಂದು ಮರುಪರೀಕ್ಷೆ ನಡೆಸಿ 30ರಂದು ಫಲಿತಾಂಶ ಪ್ರಕಟಿಸುವುದಾಗಿ ಮಾಹಿತಿ ನೀಡಿದೆ.
ವಿದ್ಯಾರ್ಥಿಗಳ ಹಿತ ಕಾಪಾಡಲು ಬದ್ಧವಾಗಿದೆ ಎಂದು ಹೇಳಿರುವ ಸುಪ್ರೀಂಕೋರ್ಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಜೂ.10, 11 ಮತ್ತು 12ರಂದು ಸಮಿತಿಯ ಸಭೆ ನಡೆಸಲಾಗಿತ್ತು.
ಏನಿದು ಪ್ರಕರಣ:
ವಿವಿಧ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗುವ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ನಡುವೆಯೇ, ಪರೀಕ್ಷಾ ಅಕ್ರಮ ನಡೆಸಿದ್ದ 23 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿತ್ತು. ಅಲ್ಲದೆ ಉಳಿದ 40 ಅಭ್ಯರ್ಥಿಗಳ ಫಲಿತಾಂಶ ತಡೆಹಿಡಿಯಲಾಗಿದೆ ಎಂದು ಮಂಡಳಿ ನಿರ್ದೇಶಕ ಸುಬೋಧ್‌ಕುಮಾರ್ ತಿಳಿಸಿದ್ದರು.
ಆದರೆ ಈ ಪ್ರಕರಣಗಳು ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾದ ಪ್ರಕರಣಗಳಿಗೆ ಸಂಬಂಧಿಸಿದ್ದಲ್ಲ. ಬದಲಾಗಿ, ಅಭ್ಯರ್ಥಿಗಳ ಪರವಾಗಿ ಇನ್ನೊಬ್ಬರು ಪರೀಕ್ಷೆ ಬರೆದ, ಅಕ್ರಮ ಎಸಗಿದ, ಮಾಹಿತಿ ತಿರುಚಿದ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿದೆ.
ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ. ಬದಲಾಗಿ 63 ಅಭ್ಯರ್ಥಿಗಳು ಅಕ್ರಮ ಎಸಗಿರುವುದು ಕಂಡುಬಂದಿದೆ. ಇದರಲ್ಲಿ ತಜ್ಞ ಸಮಿತಿಯ ಶಿಫಾರಸ್ಸಿನ ಮೇರೆಗೆ 23 ಅಭ್ಯರ್ಥಿಗಳನ್ನು 1-3 ವರ್ಷಗಳವರೆಗೆ ಪರೀಕ್ಷೆ ತೆಗೆದುಕೊಳ್ಳಲು ನಿರ್ಬಂಧ ವಿಧಿಸಲಾಗಿದೆ. ಉಳಿದ 40 ಅಭ್ಯರ್ಥಿಗಳ ಫಲಿತಾಂಶ ತಡೆಹಿಡಿಯಲಾಗಿದೆ. ಜೊತೆಗೆ 1563 ಅಭ್ಯರ್ಥಿಗಳಿಗೆ ಕೃಪಾಂಕ ನೀಡಿರುವ ವಿಚಾರದಲ್ಲಿ ಮರುಪರೀಕ್ಷೆ ಇಲ್ಲವೇ ಇತರ ಮಾರ್ಗದ ಮೂಲಕ ಯಾರಿಗೂ ಅನ್ಯಾಯವಾಗದಂತೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಸುಬೋಧ್‌ಕುಮಾರ್ ತಿಳಿಸಿದ್ದರು.
ಏಕೆ ಕೃಪಾಂಕ?:
1,563 ಅಭ್ಯರ್ಥಿಗಳಿಗೆ 70-80 ಅಂಕ ಕೃಪಾಂಕ ನೀಡಿರುವ ಕುರಿತು ಸ್ಪಷ್ಟನೆ ನೀಡಿ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ತಾಂತ್ರಿಕ ಕಾರಣದಿಂದ ಪರೀಕ್ಷೆಯನ್ನು ತಡವಾಗಿ ಆರಂಭಿಸಿದ ಕಾರಣ ಕೃಪಾಂಕ ನೀಡಲಾಗಿದೆ. ಈ ಪೈಕಿ ಕೇವಲ 6 ಮಂದಿ ಮಾತ್ರ ಕೃಪಾಂಕದಿಂದ ಪೂರ್ಣಾಂಕ ಪಡೆದಿದ್ದು, 61 ಮಂದಿ ನೈಜವಾಗಿ ಪೂರ್ಣಾಂಕ ಪಡೆದಿದ್ದಾರೆ ಎಂದು ಸ್ಪಷ್ಟಪಡಿಸಲಾಗಿತ್ತು.
ನೀಟ್ ಪರೀಕ್ಷೆಯ ನಂತರ ಇದೀಗ ಫಲಿತಾಂಶವೂ ಭಾರೀ ವಿವಾದಕ್ಕೀಡಾಗಿದ್ದು, ಈ ಬಗ್ಗೆ ಉನ್ನತ ತನಿಖೆಯಾಗಬೇಕು ಹಾಗೂ ಈಗ ನಡೆದಿರುವ ಪರೀಕ್ಷೆ ರದ್ದುಪಡಿಸಿ ಮರು ಪರೀಕ್ಷೆ ನಡೆಸಬೇಕು ಎಂದು ದೇಶದ್ಯಂತ ಪ್ರತಿಭಟನೆ ನಡೆದಿತ್ತು. ಮೇ 5ರಂದು ದೇಶದ 4750 ಕೇಂದ್ರಗಳಲ್ಲಿ ನಡೆದ ನೀಟ್ ಪರೀಕ್ಷೆಗೆ 24 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 67 ವಿದ್ಯಾರ್ಥಿಗಳು 720 ಅಂಕಗಳನ್ನು ಪಡೆದರೆ, 6 ಮಂದಿ ಹರಿಯಾಣದ ಫರಿದಾಬಾದ್‌ನಲ್ಲಿ ಪರೀಕ್ಷೆ ಬರೆದು 720 ಅಂಕಗಳನ್ನು ಪಡೆದುಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು.
ಶಿಕ್ಷಣ ಸಚಿವರ ಪ್ರತಿಕ್ರಿಯೆ:
ಕೇಂದ್ರ ಸರ್ಕಾರ ಮತ್ತು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಬದ್ಧವಾಗಿದೆ ಎಂದು ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ನಾನು ಭರವಸೆ ನೀಡುತ್ತೇನೆ. 24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಪರೀಕ್ಷೆಯಲ್ಲಿ ಯಾವುದೇ ಪೇಪರ್ ಸೋರಿಕೆಯಾಗಿರುವ ಬಗ್ಗೆ ಇನ್ನೂ ಪುರಅವೆ ಕಂಡುಬಂದಿಲ್ಲ, ಸುಮಾರು 1,560 ವಿದ್ಯಾರ್ಥಿಗಳಿಗೆ ನ್ಯಾಯಾಲಯದ ಶಿಫಾರಸು ಮಾಡಲಾದ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ. ಅದಕ್ಕಾಗಿ ಶಿಕ್ಷಣ ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು 2024 ನೀಟ್ ಪರೀಕ್ಷೆಯ ಕುರಿತು ಸುಪ್ರೀಂಕೋರ್ಟ್ ವಿಚಾರಣೆಯ ಕುರಿತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.